Tuesday 7 December 2010

ಬೇಕು - ಸೋಲಬೇಕು.

ಹೋದಾಗ ಬಂದಾಗ
ನಿಂತಾಗ ಕೂತಾಗ
ನಾನು ನಿನಗೆಲ್ಲವನು ಹೇಳಬೇಕು..

ಇದ್ದಾಗ ಇರದಾಗ
ನಕ್ಕಾಗ ಅತ್ತಾಗ
ನೀನು ನನ್ನೆಲ್ಲವನು ಕೇಳಬೇಕು..

ನಿದ್ದೆಯಲೋ ಎಚ್ಚರದಿ
ಕನಸಿನಲೋ ಕನವರಿಸಿ
ನಾವೀರ್ವರೂ ತೆರೆದ ಬಯಲಾಗಬೇಕು..

ನಾ ನಿನ್ನ ಎದೆ ದನಿಗೆ
ನೀ ನನ್ನ ಎದೆಯೊಳಗೆ
ಮೈ ಉದ್ದಕೂ ತೆರೆದ ಕಿವಿಯಾಗಬೇಕು..

ಅನಿಸಿದೆಲ್ಲವ ಹೇಳಿ
ಹೇಳಿದೆಲ್ಲವ ಅಳೆದು
ಅಳುವಳಿಸಿ ರಮಿರಮಿಸಿ ನಲಿಯಬೇಕು..

ನಿನಗೆಲ್ಲ ನಾ ಸೋತು
ನನಗೆಲ್ಲ ನೀ ಸೋತು
ಸೋಲಿನಿಂದಲೆ ಬದುಕು ಗೆಲ್ಲಬೇಕು..

---0---

Thursday 2 December 2010

ನೆನಪು - 5

ಡ್ರಿಲ್ ಮಾಸ್ತರರ ನಿಜವಾದ ಹೆಸರೇನೆಂದು ಇಂದಿಗೂ ಗೊತ್ತಿಲ್ಲ. ಡ್ರಿಲ್ ಎಂಬ ಶಬ್ಧದೊಡನೆ ನೆನಪಾಗುವ ಶಿಸ್ತು ಅವರು. ಯಾವತ್ತೂ ಟಿಪ್ ಟಾಪು.. ಯಾವತ್ತೂ ಬಿಳಿ ಶರ್ಟು- ಕಪ್ಪು ಪ್ಯಾಂಟಿನಲ್ಲೇ ಇರುತ್ತಿದ್ದವರು.
ಕಪ್ಪು ಮೈ ಬಣ್ಣದವರೆಂದು ಹೇಳಬಹುದಾದರೂ ಒತ್ತಾದ ಕಪ್ಪು ಹುಬ್ಬುಗಳು, ತೀಕ್ಷ್ಣವಾಗಿ ಹೊಳೆಯುವ ಕಿರಿದಾದ ಕಣ್ಣುಗಳು ಮತ್ತು ತಿದ್ದಿದ ಮೂಗಿನಿಂದಾಗಿ 'ಲಕ್ಷಣ'ವೆನಿಸುವಂತಿದ್ದವರು.
ಶಾಲೆಯ ಹಿಂದಿನ ಎತ್ತರದ ಆಟದ ಮೈದಾನಿನಲ್ಲಿ ಮಕ್ಕಳನೆಲ್ಲ ಸರಿಯಾದ ಸಾಲು ಸಾಲಿನಲ್ಲಿ ನಿಲ್ಲಿಸಿ ವ್ಯಾಯಾಮ ಹೇಳಿಕೊಡುತ್ತಿದ್ದರು.. ತುಂಬಾ ನೀಟಾಗಿರುತ್ತಿತ್ತು.
ಈ ಡ್ರಿಲ್ ಮಾಷ್ಟ್ರು ಹಲ್ಲುಗಳೇ ಕಾಣದಂತೆ ನಗುತ್ತಿದ್ದುದು ವಿಶೇಷ! ನಗುವಾಗ ನಾಲಿಗೆಯನ್ನು ಪೆಪ್ಪರುಮಿಂಟಿನಂತೆ ಕೆನ್ನೆಯ ಒಳಬದಿಗೆ ಗುಂಡಗೆ ಮಡಿಚಿಟ್ಟುಕೊಂಡೆ ಇರುತ್ತಿದ್ದ ಕಾರಣ ಬಿಗಿದ ಬಾಯಿಯಿಂದ ಹಲ್ಲುಗಳು ಹೊರಗೆ ಕಾಣುತ್ತಲೇ ಇರಲಿಲ್ಲ.
ಇನ್ನೂ ಒಂದು ಹೇಳಬೇಕು.. ಪ್ರತಿಬಾರಿಯೂ ಅವರನ್ನು ಕಂಡಾಗಲೆಲ್ಲ ಕಾಗೆಯ ನೆನಪಾಗುತ್ತಿದ್ದದ್ದು..ಅ..ಅವರು ಕೂದಲು ಕತ್ತರಿಸಿಕೊಳ್ಳುತ್ತಿದ್ದ ಶೈಲಿಯಿಂದಾಗಿ!

ಸದಾ ಬಿಳಿಯ ವೇಷ್ಠಿ ಅಥವಾ ಬಿಳಿಯ ಗರಿ ಗರಿ ಪಂಚೆ ಮತ್ತು ಬಿಳಿಯ ಶರ್ಟಿನಲ್ಲೆ ಇರುತ್ತಿದ್ದ, ಮಾಸದ ಮುಗುಳ್ನಗೆಯ, ಮೃದು ಧ್ವನಿಯ ಹೆಡ್ ಮಾಸ್ತರರನ್ನು ಹಾಗೆಂದು ಕರೆಯುವುದೇ ಹೆಮ್ಮೆ ಎನಿಸುತ್ತಿತ್ತು.
ಅವರ ಮುಖದಲ್ಲಿ ಅದೆಷ್ಟು ಪ್ರಸನ್ನತೆ ಎಂದರೆ ಅವರನ್ನು ನೋಡಿದವರೆಲ್ಲ ಕ್ಷಣದಲ್ಲಿ ಆ ಪ್ರಸನ್ನತೆ-ಶುಭ್ರತೆಯನ್ನು ತಾವೂ ಅನುಭವಿಸಿಬಿಡುತ್ತಾರೇನೋ ಎನ್ನುವ ಹಾಗೆ.
ಅವರ ಕಣ್ಣ ರೆಪ್ಪೆಗಳು ನಮ್ಮ-ನಿಮ್ಮೆಲ್ಲರವುಗಳಿಗಿಂತ ಬಹಳಷ್ಟು ಹೆಚ್ಚು ಬಾರಿ ಬಡಿದುಕೊಳ್ಳುತ್ತಿದ್ದವು. ಭಾಷಣ ಮಾಡುವಾಗ ಕೆಲವೊಮ್ಮೆ ಹುಬ್ಬುಗಳು ಮೇಲೇರಿದರೆ, ಮತ್ತೆ ಕೆಲ ನಿಮಿಷಗಳ ಕಾಲ ಅವು ಹಾಗೆಯೇ ಅಲ್ಲಿಯೇ ಇದ್ದು, ಕಣ್ಣು ಮಿಟುಕಿಸದೆ ನೋಡುತ್ತಿದ್ದಂತೆ ಕಂಡರೆ, ಅವರು ಮಾತುಗಳಿಗೋಸ್ಕರ ಹುಡುಕಾಟ ನಡೆಸುತ್ತಿರುವರೇನೋ ಎಂದು ಎನಿಸಬಹುದಿತ್ತು.
ಅವರಿಗೆ ಹೆಚ್ಚಿನ ವಿದ್ಯಾಭ್ಯಾಸವಿದ್ದದ್ದಕ್ಕೋ ಏನೋ ಹೆಚ್ಚು ವಿನಯಶೀಲರಾಗಿ ಕಾಣುತ್ತಿದ್ದರು.

ಸ್ವಾತಂತ್ರ್ಯೋತ್ಸವ , ಗಾಂಧೀಜಯಂತಿ, ಗಣರಾಜ್ಯೋತ್ಸವ, ಅಧ್ಯಾಪಕರ ದಿನ, ಮಕ್ಕಳ ದಿನಾಚರಣೆ ಮುಂತಾದ ವಿಶೇಷ ದಿನಗಳಲ್ಲಿ ಇಡಿಯ ಶಾಲೆ ಒಂದೇ ದೊಡ್ಡ ಕೊಠಡಿ ಅಥವಾ 'ಹಾಲ್' ಆಗುತ್ತಿತ್ತು.
ಉಳಿದ ದಿನಗಳಲ್ಲಿ ಎಲ್ಲ ತರಗತಿಗಳ ವಿಂಗಡಣೆಯಾಗುತ್ತಿದ್ದದ್ದು ಗೋಡೆಗಳ ಬದಲಿಗೆ ಇರಿಸಲಾಗಿರುವ ತಟ್ಟಿಗಳಿಂದ! ಬಹುಶ: ಅವು ಬಿದಿರಿನ ತೆಳುಹಾಳೆಗಳಂತ ಪಟ್ಟಿಗಳನ್ನು ಹೆಣೆದು ತಯಾರಿಸಿದ್ದಿರಬೇಕು.
ಈ ಕಡೆಯಿಂದ ಒಂದು-ಎರಡು ತರಗತಿಗಳು ಶುರುವಾದರೆ, ಆ ತುದಿಗೆ - ಕೊನೆಯಲ್ಲಿ ಏಳನೆಯ ತರಗತಿ. ಅದು ವೇದಿಕೆಯ ಮೇಲೆ. ವಿಶೇಷ ದಿನಗಳಲ್ಲಿ ತಟ್ಟಿ, ಬೆಂಚುಗಳನ್ನೆಲ್ಲ ಬದಿಗೆ ಸೇರಿಸಿಟ್ಟು ವೇದಿಕೆಯ ಮೇಲೆ ಮೇಜು-ಕುರ್ಚಿ ಗಳನ್ನು ಜೋಡಿಸಲಾಗುತ್ತಿತ್ತು.
ಆಗೆಲ್ಲ ಎಷ್ಟು ಉತ್ಸಾಹ ಮಕ್ಕಳಿಗೆ! ಪುಸ್ತಕದ ಚೀಲಗಳನ್ನು ಮನೆಯಲ್ಲೇ ಬಿಟ್ಟು, ಕರ್ಚೀಫೊನ್ದನ್ನೇ ಕೈಯಲ್ಲಿ ಹಿಡಿದುಕೊಂಡೋ.. ಜೇಬಿಗೆ ತುರುಕಿಕೊಂಡೋ.. ಬಂದ ಬಣ್ಣ-ಬಣ್ಣದ ಅಂಗಿಯ ಮಕ್ಕಳಿಗೆ ಬೆಳಗಿನಿಂದಲೇ ಏನೋ ಸಂಭ್ರಮ..
ಒಂದೊಂದು ಚೌಕಳಿಯಲ್ಲಿ ಒಬ್ಬೊಬ್ಬರು ಎಂಬ ಹಾಗೆ ಸಾಲು-ಸಾಲಾಗಿ ನೆಲದ ಮೇಲೆ ಕುಳಿತು ಕೊಳ್ಳುವಾಗ ಪ್ರೀತಿಯ ಗೆಳತಿಯರು ತಮ್ಮ ಅಕ್ಕ-ಪಕ್ಕದಲ್ಲೇ ಕೂರಬೇಕು ಎಂಬ ತವಕ ಜೊತೆಗೆ. ತಮ್ಮ ತಮ್ಮ ಅನಿಸಿಕೆಗಳನ್ನು ಪರಸ್ಪರ ಪಿಸುಗುಡುವ ಮತ್ತೆ ಯಾವುದಕ್ಕಾದರೂ ಕಿಸಕ್ಕನೆ ನಗುವ ಅವಕಾಶವಿತ್ತಲ್ಲ ಅಲ್ಲಿ, ಅದಕ್ಕೆ!
ಹುಡುಗರೆಲ್ಲ ಹಾಲಿನ ಬಲ ಭಾಗಕ್ಕೆ ಮತ್ತೆ ಹುಡುಗಿಯರೆಲ್ಲ ಎಡಭಾಗಕ್ಕೆ ಕೂರಬೇಕು. ಆ ಕಡೆ, ವೇದಿಕೆಯಲ್ಲಿ ಭಾಷಣ ಮಾಡಲು ಆಯ್ಕೆಗೊಂಡ ರಾಜೆಶನಿಗೋ..ಶಶಿಧರನಿಗೋ, ಈ ಕಡೆ ಜಯಂತಿಗೋ..ಶ್ಯಾಮಲಗೋ.. ಮೈಯೆಲ್ಲಾ ಗಡಿಬಿಡಿ, ನಡುಕ.
ಗಳಿಗೆಗೊಮ್ಮೆ ಬರೆದು ತಂದ ಪುಟಗಳನ್ನೂ ತಿರುವುತ್ತ, ಹಣೆಯ ಮೇಲಿನ ಮಣಿಸಾಲು ಒರೆಸುತ್ತಾ, ವೇದಿಕೆಗೂ ಅಲ್ಲಿಂದ ಮುಖ್ಯ ಬಾಗಿಲಿಗೂ ಕ್ಷಣ-ಕ್ಷಣ ಕಣ್ಣು ಹೊರಳಿಸುತ್ತ..ಕಾಯುವುದೇ ಅವರ ಕೆಲಸ. ಇನ್ನುಳಿದವರಿಗೆ ಗುಸು..ಗುಸು, ಏನೋ ಮಾತು.
ಹಗುರವಾಗಿ ಮೂಗಿನತ್ತ ತೇಲಿ ಬರುವ ಊದಿನಕಡ್ಡಿಯ ಪರಿಮಳದ ಜೊತೆಗೆ ಹೆಣ್ಣುಮಕ್ಕಳ ತಲೆಯ ತರಹೇವಾರಿ ಹೂಗಳ, ಹಚ್ಚಿದ ಕೊಬ್ಬರಿ ಎಣ್ಣೆಯ ವಾಸನೆ..
ಅಷ್ಟರಲ್ಲಿ ಇದ್ದಕ್ಕಿದ್ದಂತೆ ಏನೋ ಗಡಿಬಿಡಿ, ಎಲ್ಲ ಕಡೆಗಳಿಂದ. ಹೂಗುಚ್ಛ, ಹಾರಗಳ ಹಿಡಿದು ಮಾಸ್ತರುಗಳ ಓಡಾಟ.. ಮುಖ್ಯ ಅತಿಥಿಗಳ ಆಗಮನ. ಊರಿನ, ಅಥವಾ ಪರಊರುಗಳ ಹಿರಿಯರೇ ಈ ಸ್ಥಾನಗಳನ್ನು ಅಲಂಕರಿಸುವವರು ಹೆಚ್ಚಾಗಿ.
ವೇದಿಕೆಗೆ ಎಲ್ಲರೂ ಬಂದ ಮೇಲೆ ಹಾರಾರ್ಪಣೆ, ಚಪ್ಪಾಳೆಗಳು, ಮತ್ತೆ ದಟ್ಟ ಬಣ್ಣದ, ದೊಡ್ಡ ದೊಡ್ಡ ಹೂಗಳ ಲಂಗ ಧರಿಸಿದ ಪುಟ್ಟ ಪುಟ್ಟ ಹೆಣ್ಣುಮಕ್ಕಳಿಂದ ಪ್ರಾರ್ಥನೆ. ಎಷ್ಟು ಕತ್ತು ಮೇಲೆತ್ತಿದರೂ ಮೈಕಿನ ಹತ್ತಿರ ಹೋಗಲಾಗದ ಕತ್ತುನೋವಿನಿಂದ ನಡುನಡುಗುವ ಸ್ವರಗಳು, ಸ್ವಲ್ಪ ದೂರದಿಂದಲೇ ಎಂಬಂತೆ ಕೇಳುವುದು.. - " ವಂದಿಪೆ ನಿನಗೆ ಗಣನಾಥ.. ಮೊದಲೊಂದಿಪೆ....."



(ಮುಂದುವರಿಯುವುದು.)

Friday 19 November 2010

ನೆನಪು - ೪


ಮನಸ್ಸಿಗೆ ಹತ್ತುವಂತೆ ಉತ್ತಮ ರೀತಿಯಲ್ಲಿ ಪಾಠ ಮಾಡುತ್ತಿದ್ದವರು ಗಣೇಶ ಮಾಸ್ತರರು. ಶಾಲೆಯ ವಾರ್ಷಿಕ ಪತ್ರಿಕೆ ' ತೊದಲುನುಡಿ'ಗೆಂದು ಕತೆ-ಕವನ-ಚುಟುಕು ಮತ್ತೆ ಪ್ರಬಂಧಗಳನ್ನು ಅವರ ಕೈಗೊಪ್ಪಿಸುತ್ತಿದ್ದಾಗ ಮೆಚ್ಚುಗೆ-ಸಂತೋಷ ವ್ಯಕ್ತ ಪಡಿಸಿದ್ದರು.

ಇವರ ಕಣ್ಣುಗಳು ವಿದ್ಯಾರ್ಥಿನಿಯರ ಮೇಲೆ ಸ್ವಲ್ಪ ಹೆಚ್ಚೇ ಎಂಬಂತೆ ಓಡಾಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯ. ಮತ್ತು ಒಂಥರಾ ಕಸಿವಿಸಿ..ಮುಜುಗರ.

ಪಾಠ ಮಾಡುತ್ತಾ ನಡುನಡುವೆ ಎಲ್ಲಾದರೂ ಕಣ್ಣಿಗೆ ಕಣ್ಣು ಸೇರಿದಾಗ ಪಟಕ್ಕನೆ ಸಣ್ಣದಾಗಿ ಕಣ್ಣು ಹೊಡೆಯುವುದು ಇವರ ಚೇಷ್ಟೆಗಳು. ( ಮುಖ ನೋಡದ ಹೊರತು ಪಾಠದಲ್ಲಾಗಲಿ ಆಡುವ ಮಾತಿನಲ್ಲಾಗಲಿ ಏಕಾಗ್ರಹಿಸುವುದು ನನ್ನಂತವರಿಗೆ ಸ್ವಲ್ಪ ಕಷ್ಟ! ) "ಬೆಕ್ಕು ಕಣ್ಣು ಮುಚ್ಚಿ.... " ಗಾದೆಯನ್ನು ಇವರು ಕೇಳೆ ಇರಲಿಲ್ಲವೇನೋ !

ಪರೀಕ್ಷೆಯ ನಂತರ ಉತ್ತರ ಪತ್ರಿಕೆ ಹಂಚುವಾಗ, ಹೆಸರು ಕರೆದಾಕ್ಷಣ ಮೇಜಿನ ಹತ್ತಿರ ಹೋಗುವುದಕ್ಕಿತ್ತಲ್ಲ, ಆಗ ಉತ್ತರ ಪತ್ರಿಕೆ ಕೊಡದೆ ಹತ್ತಿರ ಹತ್ತಿರ ಇನ್ನೂ ಹತ್ತಿರ ಕರೆದು ಭುಜದ ಮೇಲೆ ಕೈ ಬಳಸಿ ತಂದು ಮೈಗಾನಿಸಿಕೊಂಡು, ಅದೂ ಇದೂ ತಪ್ಪು-ಸರಿಗಳ ವಿಮರ್ಶೆ ಮಾಡುತ್ತ ರಟ್ಟೆಯ ಮೇಲೆ ಕೈಬೆರಳುಗಳಿಂದ ಬಿಗಿಯಾಗಿ ಒತ್ತಿ ನೋಯಿಸದಿದ್ದರೆ ಅವರಿಗೆ ತಿಂದ ಅನ್ನ ಮೈಗೆ ಹಿಡಿಯುತ್ತಿರಲಿಲ್ಲವೇನೋ..

ಆವಾಗೆಲ್ಲ ಕಣ್ಣಲ್ಲಿ ನೀರು..ಮನಸಲ್ಲಿ ಹಿಡಿ ಶಾಪ. ನೋಯಿಸಿಕೊಂಡವರಿಗೆ ಗೊತ್ತು ಆ ಕಷ್ಟ! ನೋಡುತ್ತಿರುವ ಇತರ ವಿದ್ಯಾರ್ಥಿಗಳಿಗೆಲ್ಲ ಆಟಕ್ಕೊಂದು-ಮಾತಿಗೊಂದು ಸುಲಭ ವಸ್ತು!

ಕೆಲವೊಮ್ಮೆ ಅವರ ಅನಿರೀಕ್ಷಿತ ಕಚಗುಳಿಗೆ, ತಡೆಯಲಾಗದೆ ನಕ್ಕುಬಿಟ್ಟರಂತೂ ಮುಗಿಯಿತು! - ಗಣೇಶ ಮಾಸ್ತರರ ಹೆಸರಿನ ಜೊತೆ ಅವರ ಹೆಸರುಗಳು ಮಾರನೆಯ ದಿನವೇ ಅಥವಾ ಮುಂದಿನ ದಿನಗಳಲ್ಲಿ ಶಾಲೆಯ ಹಿಂದಿನ ಗೋಡೆಗಳಲ್ಲಿ ವಿರಾಜಮಾನ ಕಟ್ಟಿಟ್ಟಿದ್ದೇ.

ಆರು-ಏಳನೆಯ ತರಗತಿಯ ಹೆಣ್ಣು ಮಕ್ಕಳಲ್ಲಿ ಹಲವರು ಈ ಕಾರಣ ಹಲವಾರು ರಾತ್ರಿಗಳ ನಿದ್ದೆ ಬಿಟ್ಟಿರಬಹುದೆಂದು ನಿಶ್ಚಯವಾಗಿಯೂ ಹೇಳಬಹುದು.

ಇನ್ನು ಡ್ರಿಲ್ ಮಾಸ್ತರು, ಹಿಂದಿ ಟೀಚರು ನೆನಪಾಗುತ್ತಾರೆ.

ಹಿಂದಿ ಟೀಚರು ಕಥೆ ಪುಸ್ತಕಗಳಲ್ಲಿ ಓದುತ್ತಿದ್ದ ಹಾಗೆ - ತೆಳ್ಳಗೆ..ಬೆಳ್ಳಗೆ ನೀಳ ಜಡೆ..ಪುಟ್ಟ ಶರೀರ.. ಬಣ್ಣ-ಬಣ್ಣದ ಹೂಗಳ ಸೀರೆ, ತೆಳ್ಳಗಿನ ಬಿಳಿಯ ಕೈಗೆ ಕಪ್ಪು ರಿಸ್ಟ್ ವಾಚು, ಹೆಗಲ ಮೇಲಿಂದ ಹಾಕಿಕೊಳ್ಳುತ್ತಿದ್ದ ಕಪ್ಪು ಹ್ಯಾಂಡ್ ಬ್ಯಾಗು, ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಹಾಕಿದರೂ ನೀಟಾಗಿ ಬಾಚಿ ಹೆಣೆದ ಉದ್ದ ಜಡೆ. ಒಟ್ಟಿನಲ್ಲಿ ನೀಟು-ನೀಟಾಗಿ ಕಾಣುವವರು, ಮತ್ತು ಶಿಸ್ತಾಗಿ ಪಾಠ ಮಾಡುತ್ತಿದ್ದವರು ಕೂಡಾ.

ಆದರೆ ' ಛೇ ' ಎಂದನ್ನಿಸುತ್ತಿದ್ದುದು ಅವರ ಕೊಂಚ ಉಬ್ಬಿದ ಹಲ್ಲು, ಮತ್ತೆ ಅದರ ಮೇಲಿನ ಕಪ್ಪು ಗರಗಸದಂತೆ ಕಾಣುತ್ತಿದ್ದ ಸರಿಗೆಯ ಪಟ್ಟಿ. ಮತ್ತೆ ಪಾಠ ಮಾಡುತ್ತಿದ್ದಾಗ ಬಾಯ ಎರಡೂ ತುದಿಗಳಲ್ಲಿ ಒಸರುತ್ತಿದ್ದ ಎಂಜಲು..
ಆಗೆಲ್ಲ ಅವರನ್ನು ನೋಡುತ್ತಿದ್ದ ಮಕ್ಕಳೇ ಅವರ ಪರವಾಗಿ ಎಂಜಲು ನುಂಗಿಕೊಳ್ಳುತ್ತಿದ್ದಿದ್ದು..

ಅವರೆಷ್ಟು ಪುಟ್ಟ ಆಕಾರವೆಂದರೆ ಸಿಟ್ಟು ಬಂದಾಗ ಸ್ಕೇಲನ್ನು ಕೈಗೆತ್ತಿಕೊಂಡು ಜೋರು ಮಾತಾಡುತ್ತಿದ್ದರೆ, ಕೈ, ಕೈಯಲ್ಲಿನ ಸ್ಕೇಲು, ಅಷ್ಟಲ್ಲ, ಇಡಿಯ ಮೈಯೆಲ್ಲ ಥರ ಥರ ಕಂಪನ. ಆಗೇನಾದರೂ ಅವರನ್ನು ಸ್ವಲ್ಪ ಜೋರಾಗಿ ದೂಡಿದಿರೋ, ಅಥವಾ 'ಫೂ..' ಎಂದೇನಾದರೂ ಗಾಳಿಯೂದಿದಿರೋ, ಬಿದ್ದೇ ಬಿದಬಹುದಾದಷ್ಟು ಪುಟಾಣಿ ಜೀವ!

ಏನಿದ್ದರೂ ದಿನ ಬಿಟ್ಟು ದಿನ ಅವರು ಮುಡಿದುಕೊಳ್ಳುತ್ತಿದ್ದ ಥರ-ಥರದ ಹೂವುಗಳು.. ಅದರಲ್ಲೂ ನೀರ ಹನಿ ಹೊತ್ತು ಎರಡೇ ಎರಡು ಹಸಿರೆಲೆಯ ನಡುವೆ ನಗುವ ಪನ್ನೀರ ಗುಲಾಬಿ..ನೋಡುವುದೇ ಕಣ್ಣಿಗೊಂದು ಹಬ್ಬ!

ಇನ್ನು ಡ್ರಿಲ್ ಮಾಸ್ತರ ಬಗ್ಗೆ ಬರೆಯುವುದಾದರೆ ಅವರು ವಾರದಲ್ಲಿ ಎರಡು, ತಪ್ಪಿದರೆ ಮೂರು ದಿನ ಮಾತ್ರವೇ ಕಾಣುತ್ತಿದ್ದುದು.


(ಮುಂದುವರಿಯುವುದು...)

Sunday 31 October 2010

ನೆನಪು - 3

ನೆತ್ತಿಯಿಂದ ಸ್ವಲ್ಪ ಹಿಂದಿನವರೆಗೆ ಕೂದಲೆಲ್ಲ ಉದುರಿ ಬೋಳಾಗಿ ಅಗಲವಾದ ಹಣೆ ಎಂಬಂತೆ ಕಾಣುವ, ಶರೀರದಲ್ಲಿ ದಪ್ಪಗೆ, ಕುಳ್ಳಗೆ - ಯಾವಾಗಲೂ ತೂಕಡಿಸುತ್ತಲೇ ಇರುವಂತೆ ಕಾಣುವ, ಸ್ವಲ್ಪ ತೊದಲುತ್ತಾರೇನೋ ..ಎಂಬಂತೆ ಮಾತಾಡುವ, ಮಹೇಶ್ವರ ಮಾಸ್ತರರು ಒಂದನೆಯ ಕ್ಲಾಸಿಗೆ. ಕಾಯಿಗೆ ಕಾಯಿ - ಕಡ್ಡಿಗೆ ಕಡ್ಡಿ ಸೇರಿಸಿ ಒಂದು - ಎರಡು ಕಲಿಸಿದವರು. ಒಂದೊಂದೇ ಬೆಂಚಿನ ಮಕ್ಕಳಿಗೆ ಮಗ್ಗಿ ಹೇಳಿಸುತ್ತಿದ್ದಾಗ, ಮಕ್ಕಳೆಲ್ಲ ಹೆಗಲಿಂದ ಹೆಗಲಿಗೆ ಕೈಗಳನ್ನು
ಸೇರಿಸಿಕೊಂಡು ಹಿಂದಕ್ಕೂ ಮುಂದಕ್ಕೂ ತೂಗುತ್ತ, ರಾಗವಾಗಿ ' ಒಂದೊಂದ್ಲೊಂದು.. ಒಂದೆರಡ್ಲೆರಡು ..' ಮಗ್ಗಿ ಹೇಳುತ್ತಾ ಇದ್ದದ್ದು ನೆನಪಾದೆರೆ ಸಣ್ಣ ನಗು ತೇಲಿ ಬರುತ್ತದೆ. ಮಹೇಶ್ವರ ಮಾಸ್ತರು ಬಹಳ ಸಮಾಧಾನಸ್ಥರು, ನಿಧಾನಸ್ಥರು ಕೂಡಾ. ಅವರು ಒಂದನೆಯ ತರಗತಿಯನ್ನು ಬಿಟ್ಟು ಇನ್ನೊಂದಕ್ಕೆ ಹೋಗಿದ್ದು ಕಾಣೆ.

ಸ್ವಂತ ಅಭಿಪ್ರಾಯವೇ ಇಲ್ಲವೇನೋ ಎಂಬಂತಿರುವ, ಸದಾ ಇನ್ನೊಬ್ಬರ ಮಾತನ್ನೇ ಒಪ್ಪುವಂತೆ ತಲೆದೂಗುತ್ತ ನಡೆಯುವ, 'ನಾಗರ ಹಾವೇ..ಹಾವೊಳು ಹೂವೆ ' ಹೇಳಿಕೊಟ್ಟ, ಕನ್ನಡಕ ಹೊತ್ತ ಸೌಮ್ಯ ಮೊಗದ ಜಯದೇವ ಮಾಸ್ತರರು ಎರಡನೆಯ ತರಗತಿಗೆ.

ಶಿಸ್ತಿನ ಸಿಪಾಯಿಯಾಗಿ, ಕಟ್ಟುನಿಟ್ಟಾಗಿ ಲೆಕ್ಖಪಾಠ ಮಾಡುತ್ತಿದ್ದ ಆನಂದರಾಯರು ಆನಂದವಾಗಿ ಇರುತ್ತಿದ್ದದ್ದು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾತ್ರ ! ನಾಟಕಗಳು - ಸ್ಪರ್ಧೆಗಳು - ಪ್ರಬಂಧ - ಚರ್ಚೆಗಳು ಇತ್ಯಾದಿ ಸಮಯಗಳಲ್ಲಿ ಕಟ್ಟುಪಾಡುಗಳ ಗೆರೆ ದಾಟಿ ಮುಂದೆ ಬಂದು ಹೇಳಿಕೊಡುತ್ತ ಬಹಳ ಆತ್ಮೀಯರೆನಿಸುತ್ತಿದ್ದರು ! (ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾಟಕ ರಿಹರ್ಸಲ್'ಗಳ ಅವರ ಒಡನಾಟದವನ್ನು
ನೆನೆದರೆ ಹೆಮ್ಮೆಯೆನಿಸುತ್ತದೆ !) ಆದರೆ ಲೆಕ್ಖ ಹೇಳಿಕೊಡುತ್ತಿದ್ದಾಗ ಐದನೆಯ ಬಾರಿಯೂ ತಪ್ಪು ಮಾಡಿದ್ದಕ್ಕೆ ಚಾಚಿದ ಅಂಗೈ ಮೇಲೆ ನಾಗರ ಬೆತ್ತದ ಏಟೊಂದು ಪಟ್ಟನೆ ಬಿದ್ದ ನೆನಪಾಗಿ ಈಗಲೂ ಕೈ ಚುರುಗುಟ್ಟುತ್ತದೆ !
ಏಕೆಂದರೆ ಅದೊಂದೇ ಏಟು ಸಮಗ್ರ ಶಾಲಾ ಜೀವನದಲ್ಲಿ ಸಿಕ್ಕಿದ್ದು !!

ಮಿತಭಾಷಿ ಚಂದ್ರಶೇಖರ ಮಾಸ್ತರರು , ಮತ್ತೆ ವಿಜ್ಞಾನದ ವೆಂಕಟರಮಣ ಮಾಸ್ತರರಂತೂ ಸಿಟ್ಟು ಬಂದಾಗ ಬಾಯಿಯನ್ನು ಬಿಗಿಯಾಗಿ ಮುಚ್ಚಿ ಹಿಡಿದು ದವಡೆ ಹಲ್ಲನ್ನು ಮಾತ್ರ ಮಸೆಯುತ್ತಿದ್ದವರು. ಹೊರಗಿಂದ ನೋಡುವವರಿಗೆ ಕಿವಿಯಿಂದ ಕೆಳೆಗೆ
ಎಲುಬುಗಳು ಮೇಲಕ್ಕೂ - ಕೆಳಕ್ಕೂ ಆಡುವುದು ಚೆನ್ನಾಗಿ ಕಾಣುವಂತಿರುತ್ತಿತ್ತು !

ಲೆಕ್ಖ - ವಿಜ್ಞಾನಗಳನ್ನು ಇನ್ನೂ ಒಬ್ಬರು ಹೇಳಿಕೊಡುತ್ತಿದ್ದವರು ಗಣೇಶ ಮಾಸ್ತರರು.

( ಮುಂದುವರಿಯುವುದು.. )

Monday 25 October 2010

ನೆನಪಿನ ಪಡಸಾಲೆ - 2


ಮುಂದೆ ಇರುವುದು ಕಾಯರತಾಯರ ಹೋಟ್ಲು. ಅದು ಸ್ವಲ್ಪ ಎತ್ತರಕ್ಕೆ ಇನ್ನೊಂದು ರಸ್ತೆ ಅಂಚಿಗಿದೆ. ಅವರ ಹೋಟ್ಲಿನಲ್ಲಿ ಸದ್ದುಗಳು ತುಂಬಾ ಕಮ್ಮಿ - ಜನರೇ ಹೋಗುವುದಿಲ್ಲವೇನೋ ಎಂಬ ಹಾಗೆ !
ಕರಿದ ಬನ್ಸು - ಗೋಳಿಬಜೆಗಳ ಪರಿಮಳ ಎಂದೂ ಹೊಸಿಲು ದಾಟಿ, ಹಿಂದಿನ ಮಾಡು ದಾಟಿ ಈಚೆ ಬಂದ ನೆನಪಿಲ್ಲ..
ಆದರೆ ಬರಿ ಹೆಗಲ ಮೇಲೆ ಹೊದ್ದ ಕೆಂಪು ತೋರ್ತಿನಿಂದ ಗಡ್ಡ - ಮುಖ ಒರೆಸುತ್ತಲೇ ಇರುತ್ತಿದ್ದ ದೊಡ್ಡ ಕಣ್ಣುಗಳ ಮತ್ತು ಸೌಮ್ಯ ವ್ಯಕ್ತಿ ಎನ್ನಬಹುದಾದ ಕಾಯರತಾಯರು ಮಾತ್ರ ಹೋಟ್ಲೊಳಗೆ ಶತ - ಪಥ ಓಡಾಡುತ್ತಿದ್ದುದನ್ನು ಹಲವು ಬಾರಿ ನೋಡಿದ್ದು ನೆನಪಿದೆ !
ಅದರಾಚೆಗೆ ' ಮಮ್ಮದೆ 'ಯ ಅಡಕೆ ವ್ಯಾಪಾರ. ಅದಕ್ಕೆ ತಾಗಿ ಇನ್ನೂ ಸ್ವಲ್ಪ ಎತ್ತರಕ್ಕಿರುವುದೇ ಪೋಸ್ಟ್ ಆಫೀಸು ಹಾಗೂ ರೇಶನ್ನಂಗಡಿ. ಸ್ವಲ್ಪ ಸಾಣೆ ತಲೆಯ ಪೋಸ್ಟ್ ಮಾಸ್ತರರಿಗೆ ಎಲೆ ಅಡಕೆ ಜಗಿಯುವುದರ ಜೊತೆಗೆ ಊರಿಗೆ ಬಂದ
ಪತ್ರಗಳನೆಲ್ಲ ಓದುವ ಅಭ್ಯಾಸವೆಂದು ಜನ ಬಾಯಿಗೆ ಕೈ ಅಡ್ಡ ಹಿಡಿದು ಕಿವಿಯಿಂದ ಕಿವಿಗೆ ಸಣ್ಣ ಸ್ವರದಲ್ಲಿ ಹೇಳುತ್ತಾ ನಗುತ್ತಿದ್ದುದನ್ನು ನೋಡಿದ್ದೇನೆ. ಹೇಳುವವರಿಗೇನು ಬಿಡಿ. ಆದರೆ ನೋಡಿದವರಾರೂ ಇಲ್ಲ .

ಇನ್ನು ಮುಂಚಿತದ್ಕದಲ್ಲಿ ಬಾಕಿ ಇರುವುದು ಅದೇ , ಚಿಕ್ಕುವಿನ ಬೀಡಿ ಅಂಗಡಿ. ಪೋಸ್ಟ್ ಆಫೀಸಿನ ಎದುರಿಗೆ ರಸ್ತೆಯ ಈ ಬದಿಗೆ, ಅಂದರೆ ' ಎಲ್ ' ಕೋನದ ಒಳಗಡೆಗೆ ಎನ್ನಬಹುದಾದ ಜಾಗದಲ್ಲಿ ಮುಳಿಹುಲ್ಲು ಹೊದೆಸಿದ ಒಂದು ಸಣ್ಣ ಗುಡಿಸಲದು.
ಬೀಡಿ ಎಲೆಗಳ ಸರಪರ.. ಮತ್ತೆ ಅದನ್ನು ಕಟ್ಟಿ ತರುವ ಹೆಣ್ಣುಮಕ್ಕಳ ಕೈ ಬಳೆಗಳ ಸದ್ದು ಅಲ್ಲಿ. ಇಪ್ಪತ್ಮೂರರ ಹರೆಯದ ಸ್ವಲ್ಪ ಬೆಳ್ಳನೆಯ ಹುಡುಗ, ಗಡ್ಡ - ಮೀಸೆ ಬೋಳಿಸಿ ಮಿರ - ಮಿರನೆ ಮಿಂಚುವ ಮುಖದ 'ಚಿಕ್ಕು'ವಿನ ಕಿಲಾಡಿ ಚಟಾಕಿಗಳಿಗೆ
ಪಕ್ಕನೆ ಉಕ್ಕಿ ಬರುವ ನಗೆಗಳ ಕಿಲಕಿಲ ಕಚಗುಳಿ ಅಲ್ಲಿ. ಮುಂಚಿತದ್ಕಕ್ಕೆ ಬರುವ - ಹೋಗುವ ಎಲ್ಲರ ಕಣ್ಣುಗಳೂ ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಅತ್ತ ಹಾಯದಿರುವುದಿಲ್ಲ.

ಮುಂಚಿತಡ್ಕ ದ 'ಎಲ್ ' ಆಕೃತಿಯನ್ನು ಪೂರ್ಣವಾಗಿ ಒಮ್ಮೆಲೇ ನೋಡಬೇಕಾದರೆ ಅಲ್ಲಿಂದ ಮೇಲಕ್ಕೆ ಶಾಲೆಗೇ ಹೋಗಬೇಕು. ಹೌದು. ಯಾಕೆಂದರೆ ಅದು ಗುಡ್ಡದ ತುದಿಯಲ್ಲಿದೆ. ಆದರೆ ತುತ್ತ ತುದಿಯಲ್ಲಲ್ಲ, ಗುಡ್ಡದ ಅರ್ಧ ಭಾಗದಷ್ಟೆತ್ತರಕ್ಕಿದೆ.
ಅದು ಮುಂಚಿತಡ್ಕ ಅಪ್ಪರ್ ಪ್ರೈಮರಿ ಶಾಲೆ. ಅಲ್ಲಿಗೆ ಗುಡ್ಡದ ಎರಡೂ ಕಡೆಗಳಿಂದ ಹಾವಿನ ರೀತಿ ಮಡಿ ಮಡಿಚಿ ಹರಿವಂತ ಮಣ್ಣಿನ ಮಾರ್ಗಗಳಿವೆ. ನಡುವಿನಲ್ಲಿ ಮಕ್ಕಳು ಹತ್ತಬಹುದಾದ ಹತ್ತಿರದ ನೇರ ದಾರಿ ಇದೆ. ಈ ದಾರಿಯಲ್ಲಿ ಎಲ್ಲರಿಗೆ
ನಡೆಯಲು ಕಷ್ಟವಾಗುತ್ತದೆ. ಹೆಜ್ಜೆ - ಹೆಜ್ಜೆಗೂ ಜಾರಬಹುದಾದ ಈ ಮಣ್ಣಿನ ದಾರಿಯಲ್ಲಿ ತೀರಾ ನೆಟ್ಟಗೆ ಎಂಬಂತೆ ಗುಡ್ಡ ಹತ್ತಬೇಕು ! ಇದು ಮಕ್ಕಳಿಗೆಲ್ಲ ಬಹು ಪ್ರಿಯವಾದ ದಾರಿ. ಇದರಲ್ಲಿ ಒಂದೇ ಒಂದು ಸರಿಯಾದ ದಾರಿ ಎಂಬಂತಿಲ್ಲ, ನಡೆದದ್ದೇ
ದಾರಿ ಎಂಬ ಹಾಗೆ ಹರಡಿಕೊಂಡವುಗಳಲ್ಲಿ ಯಾವುದನ್ನು ಆರಿಸಿ ನಡೆದರೂ ಹತ್ತು ಹೆಜ್ಜೆಗಳ ನಂತರ ಕಾಲೆಳೆತ.. ಏದುಸಿರು.. ಸೊಂಟನೋವೆ! ಹತ್ತಿರದ ಈಟಿಮರಗಳ ಗೆಲ್ಲುಗಳನ್ನು ಹಿಡಿವ ಸಹಾಯ ಸಿಕ್ಕರೂ ಗಕ್ಕನೆ ಅವೂ ಕಿತ್ತು ಕೈಗೆ
ಬಂದರೆ ನಿಲ್ಲಲಾಗದೆ ಕೆಳಗುರುಳಬೇಕಷ್ಟೆ !!
ಶಾಲೆಯ ಈ ದಾರಿಯಲ್ಲೇ ಇದೆ, ಪ್ರೀತಿಯ ಬೃಂದಾವನ ! ಶಾಲೆಯ ಗೆಳೆಯ - ಗೆಳತಿಯರೆಲ್ಲ ಸೇರಿ ಕಟ್ಟಿದ ಹೂತೋಟ. ಲಂಬಾನ, ಬೋಗನ್ ವಿಲ್ಲಾ ದ ದಟ್ಟ ಬೇಲಿಯೊಳಗೆ ಹೆಂಚಿನ ಚೂರುಗಳ ಸುಂದರ ಪಾತಿಗಳಲ್ಲಿ ಅವರವರ ಮನೆಗಳಿಂದಲೇ
ತಂದ ಹೂಗಿಡಗಳ ಹೊಸ ಜೀವನದಧ್ಯಾಯಗಳು ! ಬಣ್ಣ - ಬಣ್ಣಗಳ ಗೋರಂಟಿ.. ನಂದಿಬಟ್ಟಲು.. ಶಂಖಪುಷ್ಪ.. ದಾಸವಾಳ.. ಬಿಳಿ - ನೇರಳೆ ಕಣಗಿಲೆಗಳು , ಒಂದೆರಡು ಕಸಿ ಗುಲಾಬಿಗಳು.., ಗೊಂಚಲ ಬಿಳಿ - ಪನ್ನೀರ್ ಗುಲಾಬಿಗಳು .. ಹೀಗೆ.
ತೋಟ ದಾಟಿ ಇನ್ನಾರು ಹೆಜ್ಜೆ ಹತ್ತಿದರೆ ಬಂತು ಶಾಲೆಯಂಗಳ ! ಮುಂಚಿತಡ್ಕದ ಹಾಗೆ ' ಎಲ್ ' ಆಕೃತಿಯ ಕಟ್ಟಡ ಈ ಶಾಲೆಯದ್ದು ಕೂಡಾ ! ಶಾಲೆಯ ಹಿಂದೆ ಇನ್ನೂ ಸ್ವಲ್ಪ ಎತ್ತರಕ್ಕೆ ಆಟದ ಮೈದಾನ. ಆಹಾ.. ಈ ಮೈದಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಶಾಲಾ ವಾರ್ಷಿಕೊತ್ಸವವಂತೂ ಸವಿದಷ್ಟೂ ಸವೆಯದ ಕಲ್ಲುಸಕ್ಕರೆಯ ಹಾಗೆ , ಸಿಹಿಯೋ..ಸಿಹಿ !

ಹೆಡ್ಮಾಸ್ತರರನ್ನೂ ಸೇರಿಸಿ ಒಂಭತ್ತೋ..ಹತ್ತು ಜನ ಅಧ್ಯಾಪಕರು ಶಾಲೆಯಲ್ಲಿ. ಅವರಲ್ಲಿ ಒಬ್ಬರು ಹಿಂದಿ ಟೀಚರು. 'ಟೀಚರು' ಎಂದರೆ ಅದು ಕೇವಲ ಅಧ್ಯಾಪಕಿಯರಿಗೆ ಮೀಸಲಾದ ಪದವೆಂಬಂತಿತ್ತು ಅಲ್ಲಿ. ಅಧ್ಯಾಪಕರೆಲ್ಲ 'ಮಾಸ್ತರರು' ಎಂದೇ
ಕರೆಸಿಕೊಳ್ಳುತ್ತಿದ್ದರು. ಪಾಠ ಹೇಳಿಕೊಡುವುದರಲ್ಲಿ ಒಬ್ಬೊಬ್ಬರದೂ ಒಂದೊಂದು ಶೈಲಿ...


( ಮುಂದುವರಿಯುವುದು )

Thursday 21 October 2010

ನೆನಪಿನ ಪಡಸಾಲೆ ಸುತ್ತಿ ಸುಳಿದು...


ಸುದ್ದಿಯಲ್ಲಿ ಸದಾ ಬಿಸಿಯಾಗಿ, ಹೊಸದಾಗಿ, ಸ್ವಾರಸ್ಯವಾಗಿರುವ ಊರು ಮುಂಚಿತಡ್ಕ.

ಸಮೃದ್ಧ ಅಡಿಕೆ ತೋಟಗಳು - ಗದ್ದೆಗಳೂ ತುಂಬಿರುವ, ನಾಲ್ಕು ಗುಡ್ಡಗಳು ಒಂದೆಡೆ ಸೇರಿದಂತಿರುವ ತಪ್ಪಲಲ್ಲಿ ಆಂಗ್ಲ ಭಾಷೆಯ 'ಎಲ್'' ಆಕೃತಿಯಲ್ಲಿ ಒಂದಿಷ್ಟು ಅಂಗಡಿ ಮುಂಗಟ್ಟುಗಳು, ಶಾಲೆ ಹೋಟೆಲು, ಆಸ್ಪತ್ರೆಗಳನ್ನು ಹರಡಿ ನಿಂತಿದೆ.

ನಾಲ್ಕು ಜನ ಕೈ ಸೇರಿಸಿದರೂ ತಬ್ಬಲಾಗದ, ದಪ್ಪ ಕಾಂಡದ ದೇವದಾರು ಮರ ಇಡಿಯ ಮುಂಚಿತದ್ಕದ ಮಧ್ಯಭಾಗದ ಆಕರ್ಷಣೆ!

ಎತ್ತರಕ್ಕೆ ಮತ್ತೆ ಅಗಲಕ್ಕೂ ಹರಡಿ ಹಸಿರಾಗಿ ನಿಂತ ಈ ಮರದ ಕೆಳಗೆ ದಿನಕ್ಕೆರಡು ಬಾರಿ ಧೂಳೆಬ್ಬಿಸಿಕೊಂಡು ಬಂದು ನಿಲ್ಲುವ 'ನಿತ್ಯಾನಂದ', 'ಆಂಜನೇಯ' ಬಸ್ಸುಗಳು..

ಅಲ್ಲಿ ಎದುರಿಗೆ ಕಾಣಿಸುವ ಸ್ವಲ್ಪ ದೊಡ್ಡದೇ ಆಗಿರುವ ಕಟ್ಟಡ ಅಪ್ಪ ಕಟ್ಟಿಸಿದ್ದು. ತುಳುಭಾಷೆಯಲ್ಲಿ 'ಉಯ್ಯಡ್ಕ ಅಣ್ಣೆರೆ ಕಟ್ಟೋಣ '! ( ಉಯ್ಯಡ್ಕ ಯಜಮಾನರ ಕಟ್ಟಡ )

ಅದರಲ್ಲಿರುವುದು ಗ್ರಾಮೀಣ ಬ್ಯಾಂಕು, ರಂಗಣ್ಣನ ಹೋಟ್ಲು, ಮತ್ತೆ ವಿಠಲ ಮಾಷ್ಟ್ರ ಅಂಗಡಿ. ಅವರು ಮೊದಲು ಬೇರೆ ಯಾವುದೋ ಊರಿನ ಶಾಲೆಯಲ್ಲಿ ಮಾಸ್ತರರಾಗಿದ್ದರಂತೆ.

ಅವರಂಗಡಿಯ ಈಚೆಗೆ ಮೂಲೆಯಲ್ಲಿರವುದು ರಂಗಣ್ಣನ ಹೋಟ್ಲ ವ್ಯಾಪಾರ.

ಮುಂಚಿತಡ್ಕದ ಮಧ್ಯದ ದೇವದಾರು ಮರದ ಎಡಭಾಗಕ್ಕೆ ಗುಡ್ಡಕ್ಕೆ ಹತ್ತುವ ಹಾಗೆ ಸಿಮೆಂಟಿನ ಮೆಟ್ಟಿಲುಗಳು ಕಾಣುತ್ತವೆ. ಅಲ್ಲೇ ಮೇಲೆ ಊರಿನ ಆಸ್ಪತ್ರೆ. (ಈಗ ಬೇರೆ ಇವೆ.)

ಶಾಲೆ ಮಕ್ಕಳಿಗೆ ಆಸ್ಪತ್ರೆಗೆ ಹೋಗುವುದೆಂದರೆ ಮೆಟ್ಟಿಲುಗಳ ಮೇಲೆ ಆಡುವ ಪ್ರೀತಿ. ಹತ್ತುವುದು, ಇಳಿಯುವುದು, ಬದಿಯ ಕಟ್ಟೆಗಳ ಮೇಲೆ ಜರ್ರನೆ ಜಾರುವುದು..

ತಡವಾದರೂ ಸರಿಯೇ, ಶಾಲೆ ಬಿಟ್ಟ ಮೇಲೆ ಸಂಜೆಗೊಮ್ಮೆ ಆ ದಾರಿಯಾಗಿ ಮನೆಗೆ ಹೋಗುವವರು ಅಲ್ಲಿ ಆಟವಾಡಿಯೇ ಹೋಗಬೇಕು.

ಅಲ್ಲಿಂದ ಇನ್ನೂ ಕೆಳೆಗೆ ಒಂದು ಕ್ಷೌರದ ಅಂಗಡಿ, ಒಂದು ಟೈಲರ್ ವಿಷ್ಣುವಿನಂಗಡಿ, ಒಂದು ಕಟ್ಲೆರಿ ಮಾಮನ ಅಂಗಡಿ ಮತ್ತೆ ಅದೇ ಸಾಲಿನಲ್ಲಿ ಇನ್ನೊಂದು ನಾರಾಯಣನ ದಿನಸಿ ಅಂಗಡಿ.

ಹಾಗೆ ಅವೆಲ್ಲದರ ಹಿಂದಕ್ಕೆ ಸ್ವಲ್ಪ ಆಚೆಗೆ, ಬೇರೆಯಾಗಿ ನಿಂತ ಸಾರಾಯಿ ಅಂಗಡಿ.

ಇನ್ನು 'ಎಲ್'' ಆಕೃತಿಯಲ್ಲಿ ಕೋನದಿಂದ ಈಚೆ ಬರಬೇಕು. ನಡುವೆ ಸರಕಾರಿ ಬಾವಿ. ಬೆಳಗಿನ ಏಳು ಗಂಟೆಗೂ ಮೊದಲು ಮುಂಚಿತಡ್ಕದ ಹಲವಾರು ಜನರಿಗೆ ಈ ಬಾವಿಕಟ್ಟೆಯಲ್ಲಿಯೇ ತಣ್ಣೀರ ಸ್ನಾನ!

ಬಸ್ಸಿನ ಕ್ಲೀನರುಗಳು, ಹೋಟೆಲಿನ ಹುಡುಗರಿಗೆಲ್ಲ ಕಬ್ಬಿಣದ ಬಾಲ್ದಿಗಳಲ್ಲಿ ನೀರೆತ್ತಿ ಎತ್ತಿ ನೆತ್ತಿ ಮೇಲೆ ಸುರಿದುಕೊಳ್ಳುವುದೇ ಮೋಜು!

ಅದರ ಎದುರಿಗೆ ರಸ್ತೆಯ ಈ ಪಕ್ಕಕ್ಕೆ ಅಬ್ಬಾಸನ ಹೋಟ್ಲು ಮತ್ತೆ ಮೀನಿನ ಅಂಗಡಿ!

ಹೆಂಚು ಕಟ್ಟಿದೆಯಾದರೂ ಎದುರಲ್ಲಿ ಸ್ವಲ್ಪಮುಂದಕ್ಕೆ ಚಾಚಿದ ಮುಳಿಹುಲ್ಲಿನ ಮಾಡಿರುವ ಅಬ್ಬಾಸನಂಗಡಿಯ ರೇಡಿಯೋ ದಿನದ ಹಗಲೆಲ್ಲಾ ಏರು ದನಿಯಲ್ಲಿ ಹೊಡೆದುಕೊಳ್ಳುತ್ತಲೇ ಇರುತ್ತದೆ.

ವಿವಿಧಭಾರತಿ, ಮತ್ತೆ ರೇಡಿಯೋ ಶ್ರೀಲಂಕಾದ ಅಸಂಬದ್ಧ ಕನ್ನಡ ಭಾಷೆಯ ವಿವರಣೆ, ಆ ಹಿಂದಿ ಹಳೆಯ ಹಾಡುಗಳು - ಭರಪೂರ!

ಹಾಂ.. ಮತ್ತೆ ಮೀನು..

ವಾರಕ್ಕೆರಡು ಬಾರಿಮಲೆಯಾಳಿ ಹೆಂಗಸರು ಹೊತ್ತು ತರುವ ದೊಡ್ಡ ದೊಡ್ಡ ಮೀನಿನ ಬುಟ್ಟಿಗಳು ಅವನಂಗಡಿಯ ಬದಿಗೇ ಇಳಿಯುತ್ತವೆ.

ಆ ದಿನಗಳಲ್ಲಂತೂ ಅಬ್ಬಾಸನಂಗಡಿ ಒಂದುಸಣ್ಣ ಸಂತೆ!

ಮೀನಿನ ಹೆಂಗಸರ ಕಪ್ಪು ಮುಖಗಳಲ್ಲಿ ಎಲೆ ಅಡಿಕೆ ಜಗಿದು ರಸ ಒಸರುವ ಕೆಂಪು ಬಾಯಿಗಳು..

ಅಚ್ಚ ಬಣ್ಣಗಳ ಚೌಕಳಿಯ ಸೀರೆ, ಕೈ ತುಂಬಾ ಗಾಜಿನ ಬಳೆಗಳು. ಅವರ ನಗುವೋ..ಕೂಗಿ ಕರೆಯುವ ರಾಗವೋ.. ಸೊಂಟಕ್ಕೆ ಸಂಚಿ ಸಿಕ್ಕಿಸಿ ಮುಂಗೈ ತಿರುಗಿಸುವ ವೈಯ್ಯಾರವೋ ..ನೋಡಬೇಕು!

- ದಿನವೆಲ್ಲ ಬಿಸಿ ಹೊಗೆಯ ಜೊತೆ ಚಾಯ - ಕಡ್ಲೆ ಉಸ್ಲಿಯ ವಾಸನೆ.. ಹಾಗೇ ಪಕ್ಕದ ಮೀನುಗಳ ಘಮ ಘಮ - ವಿವಿಧಭಾರತಿಯ ವಿಧ ವಿಧ ಭಾಷೆಯ ಹಾಡುಗಳು..

ಹೋಟ್ಲ ಹಿಂದೆ ಕಣ ಕಣ ಕುಪ್ಪಿ ಗ್ಲಾಸುಗಳ ತೊಳೆಯುವ ಬಾಲ್ದಿಯ ಪಕ್ಕದಲ್ಲಿ ಕಡುಹಸಿರ ಕೆಸವಿನೆಲೆಗಳ ಪೊದೆಯ ಎಡೆಯಿಂದ ಜೊ೦ಯ್ಯನೆ ಹಾರುವ ಹಿಂಡುನೊಣಗಳು..

ರಾಮ - ಆಯ್ತ, ತನಿಯ - ಚೋಮನಾದಿಯಾಗಿ ಹಲವು ಗಂಡಸರ ಅಟ್ಟಹಾಸ - ನಗು - ಕೇಕೆಗಳ ನಡುವೆ ಸುಟ್ಟ ಬೀಡಿಯ ದಟ್ಟ ವಾಸನೆ!


(ಮುಂದುವರಿಯುವುದು)

Sunday 17 October 2010

ನಾ ರಾಧೆ ಅವ ಶ್ಯಾಮ

ಶೀತಲದ ಹಿಮಮಣಿಯ ಮುಡಿದಿರುವ ನವಸುಮವೆ
ಕೇಳೆನ್ನ ಕನಸಿನಲಿ ಕಳೆದಿರುಳ ಸವಿಸುಖವಾ..

ಯಮುನೆ ಸಿರಿತೊರೆಯ ಬಳಿ ಚಂದ್ರಮನ ಚೆಂಬೆಳಕು
ಮಾರುತನ ಮೃದುಸ್ಪರ್ಶ ತರುಲತೆಯ ಆಲಾಪ..
ನಾ ರಾಧೆ ಅವ ಶ್ಯಾಮ ಉಯಾಲೆ ಹೂಮಂಚ
ಅನುರಾಗ ಕೊಳಲಸುಧೆ ಪರಿಮಳಿಸಿ ನರುಗಂಪು..

ನಸುನಗೆಯ ದೊರೆ ಶ್ಯಾಮ ಕುಡಿಗಣ್ಣ ಸಂಚಲ್ಲಿ
ಬಳಿಸಾರಿ ಬರಸೆಳೆಯೆ ನಾ ಬಳ್ಳಿ ಅವನೆದೆಗೆ..
ರಂಗಾದ ಮೊಗವೆನ್ನ ಬೊಗಸೆಯಲಿ ಮೊಗೆದುಂಬಿ
ಸುರಲೋಕ ಕದತೆರೆದ ಅಧರಗಳ ಮಧುಪಾನಾ..

ಕಂಕಣದ ರಿಂಗಣವು ಕಚಗುಳಿಯ ಇಟ್ಟಂತೆ
ನೂಪುರದ ಅನುರಣನೆ ಮತ್ತೇರಿ ಮೌನದಲಿ..
ಸುಮಬಾಣ ಮೇಳೈಸಿ ಮೆಲ್ಲುಸಿರ ಸಲ್ಲಾಪ
ಒಲವೆಲ್ಲ ರೋಮಾಂಚ ಉಲ್ಲಾಸ ರಸಮಿಲನಾ..

Friday 24 September 2010

ಇಲ್ಲಿನ್ನೂ.. ಹದವಾಗಿ ಇಳಿಯುವ... ಹಿತವಾಗಿ ಸುಳಿಯುವ ಪ್ರಯತ್ನದಲ್ಲಿದ್ದೇನೆ...
ಸುಮ್ಮನೆರಡು ಕವಿಸಾಲುಗಳೊಂದಿಗೆ....

"ಕಲ್ಲುದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು ?
ಶರಣಾದ ಜೀವಕ್ಕೆ ಮರುಗಿ ಸಂತೈಸದೇ
ದೂರವಾದರೆ ಹೇಗೆ ಒಲವು ?"
- ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ. (ನಿನ್ನ ನೀತಿ)

Tuesday 26 January 2010

'ಮೆಲ್ಲೆಲರು' ಬರುವಳು...

ನಮಸ್ಕಾರ!
'ಮೆಲ್ಲೆಲರು' ಹಾಗೇ ಸುಳಿದು ಬಂದರೆ ಸ್ವಾಗತಿಸುವಿರಾ...
ನೆನಪಿನ ಪಡಸಾಲೆ ಸುತ್ತಿ ಮೆಲ್ಲನಿಳಿದು ಬರುವ ಮನಸಿದೆ!