Thursday 2 December 2010

ನೆನಪು - 5

ಡ್ರಿಲ್ ಮಾಸ್ತರರ ನಿಜವಾದ ಹೆಸರೇನೆಂದು ಇಂದಿಗೂ ಗೊತ್ತಿಲ್ಲ. ಡ್ರಿಲ್ ಎಂಬ ಶಬ್ಧದೊಡನೆ ನೆನಪಾಗುವ ಶಿಸ್ತು ಅವರು. ಯಾವತ್ತೂ ಟಿಪ್ ಟಾಪು.. ಯಾವತ್ತೂ ಬಿಳಿ ಶರ್ಟು- ಕಪ್ಪು ಪ್ಯಾಂಟಿನಲ್ಲೇ ಇರುತ್ತಿದ್ದವರು.
ಕಪ್ಪು ಮೈ ಬಣ್ಣದವರೆಂದು ಹೇಳಬಹುದಾದರೂ ಒತ್ತಾದ ಕಪ್ಪು ಹುಬ್ಬುಗಳು, ತೀಕ್ಷ್ಣವಾಗಿ ಹೊಳೆಯುವ ಕಿರಿದಾದ ಕಣ್ಣುಗಳು ಮತ್ತು ತಿದ್ದಿದ ಮೂಗಿನಿಂದಾಗಿ 'ಲಕ್ಷಣ'ವೆನಿಸುವಂತಿದ್ದವರು.
ಶಾಲೆಯ ಹಿಂದಿನ ಎತ್ತರದ ಆಟದ ಮೈದಾನಿನಲ್ಲಿ ಮಕ್ಕಳನೆಲ್ಲ ಸರಿಯಾದ ಸಾಲು ಸಾಲಿನಲ್ಲಿ ನಿಲ್ಲಿಸಿ ವ್ಯಾಯಾಮ ಹೇಳಿಕೊಡುತ್ತಿದ್ದರು.. ತುಂಬಾ ನೀಟಾಗಿರುತ್ತಿತ್ತು.
ಈ ಡ್ರಿಲ್ ಮಾಷ್ಟ್ರು ಹಲ್ಲುಗಳೇ ಕಾಣದಂತೆ ನಗುತ್ತಿದ್ದುದು ವಿಶೇಷ! ನಗುವಾಗ ನಾಲಿಗೆಯನ್ನು ಪೆಪ್ಪರುಮಿಂಟಿನಂತೆ ಕೆನ್ನೆಯ ಒಳಬದಿಗೆ ಗುಂಡಗೆ ಮಡಿಚಿಟ್ಟುಕೊಂಡೆ ಇರುತ್ತಿದ್ದ ಕಾರಣ ಬಿಗಿದ ಬಾಯಿಯಿಂದ ಹಲ್ಲುಗಳು ಹೊರಗೆ ಕಾಣುತ್ತಲೇ ಇರಲಿಲ್ಲ.
ಇನ್ನೂ ಒಂದು ಹೇಳಬೇಕು.. ಪ್ರತಿಬಾರಿಯೂ ಅವರನ್ನು ಕಂಡಾಗಲೆಲ್ಲ ಕಾಗೆಯ ನೆನಪಾಗುತ್ತಿದ್ದದ್ದು..ಅ..ಅವರು ಕೂದಲು ಕತ್ತರಿಸಿಕೊಳ್ಳುತ್ತಿದ್ದ ಶೈಲಿಯಿಂದಾಗಿ!

ಸದಾ ಬಿಳಿಯ ವೇಷ್ಠಿ ಅಥವಾ ಬಿಳಿಯ ಗರಿ ಗರಿ ಪಂಚೆ ಮತ್ತು ಬಿಳಿಯ ಶರ್ಟಿನಲ್ಲೆ ಇರುತ್ತಿದ್ದ, ಮಾಸದ ಮುಗುಳ್ನಗೆಯ, ಮೃದು ಧ್ವನಿಯ ಹೆಡ್ ಮಾಸ್ತರರನ್ನು ಹಾಗೆಂದು ಕರೆಯುವುದೇ ಹೆಮ್ಮೆ ಎನಿಸುತ್ತಿತ್ತು.
ಅವರ ಮುಖದಲ್ಲಿ ಅದೆಷ್ಟು ಪ್ರಸನ್ನತೆ ಎಂದರೆ ಅವರನ್ನು ನೋಡಿದವರೆಲ್ಲ ಕ್ಷಣದಲ್ಲಿ ಆ ಪ್ರಸನ್ನತೆ-ಶುಭ್ರತೆಯನ್ನು ತಾವೂ ಅನುಭವಿಸಿಬಿಡುತ್ತಾರೇನೋ ಎನ್ನುವ ಹಾಗೆ.
ಅವರ ಕಣ್ಣ ರೆಪ್ಪೆಗಳು ನಮ್ಮ-ನಿಮ್ಮೆಲ್ಲರವುಗಳಿಗಿಂತ ಬಹಳಷ್ಟು ಹೆಚ್ಚು ಬಾರಿ ಬಡಿದುಕೊಳ್ಳುತ್ತಿದ್ದವು. ಭಾಷಣ ಮಾಡುವಾಗ ಕೆಲವೊಮ್ಮೆ ಹುಬ್ಬುಗಳು ಮೇಲೇರಿದರೆ, ಮತ್ತೆ ಕೆಲ ನಿಮಿಷಗಳ ಕಾಲ ಅವು ಹಾಗೆಯೇ ಅಲ್ಲಿಯೇ ಇದ್ದು, ಕಣ್ಣು ಮಿಟುಕಿಸದೆ ನೋಡುತ್ತಿದ್ದಂತೆ ಕಂಡರೆ, ಅವರು ಮಾತುಗಳಿಗೋಸ್ಕರ ಹುಡುಕಾಟ ನಡೆಸುತ್ತಿರುವರೇನೋ ಎಂದು ಎನಿಸಬಹುದಿತ್ತು.
ಅವರಿಗೆ ಹೆಚ್ಚಿನ ವಿದ್ಯಾಭ್ಯಾಸವಿದ್ದದ್ದಕ್ಕೋ ಏನೋ ಹೆಚ್ಚು ವಿನಯಶೀಲರಾಗಿ ಕಾಣುತ್ತಿದ್ದರು.

ಸ್ವಾತಂತ್ರ್ಯೋತ್ಸವ , ಗಾಂಧೀಜಯಂತಿ, ಗಣರಾಜ್ಯೋತ್ಸವ, ಅಧ್ಯಾಪಕರ ದಿನ, ಮಕ್ಕಳ ದಿನಾಚರಣೆ ಮುಂತಾದ ವಿಶೇಷ ದಿನಗಳಲ್ಲಿ ಇಡಿಯ ಶಾಲೆ ಒಂದೇ ದೊಡ್ಡ ಕೊಠಡಿ ಅಥವಾ 'ಹಾಲ್' ಆಗುತ್ತಿತ್ತು.
ಉಳಿದ ದಿನಗಳಲ್ಲಿ ಎಲ್ಲ ತರಗತಿಗಳ ವಿಂಗಡಣೆಯಾಗುತ್ತಿದ್ದದ್ದು ಗೋಡೆಗಳ ಬದಲಿಗೆ ಇರಿಸಲಾಗಿರುವ ತಟ್ಟಿಗಳಿಂದ! ಬಹುಶ: ಅವು ಬಿದಿರಿನ ತೆಳುಹಾಳೆಗಳಂತ ಪಟ್ಟಿಗಳನ್ನು ಹೆಣೆದು ತಯಾರಿಸಿದ್ದಿರಬೇಕು.
ಈ ಕಡೆಯಿಂದ ಒಂದು-ಎರಡು ತರಗತಿಗಳು ಶುರುವಾದರೆ, ಆ ತುದಿಗೆ - ಕೊನೆಯಲ್ಲಿ ಏಳನೆಯ ತರಗತಿ. ಅದು ವೇದಿಕೆಯ ಮೇಲೆ. ವಿಶೇಷ ದಿನಗಳಲ್ಲಿ ತಟ್ಟಿ, ಬೆಂಚುಗಳನ್ನೆಲ್ಲ ಬದಿಗೆ ಸೇರಿಸಿಟ್ಟು ವೇದಿಕೆಯ ಮೇಲೆ ಮೇಜು-ಕುರ್ಚಿ ಗಳನ್ನು ಜೋಡಿಸಲಾಗುತ್ತಿತ್ತು.
ಆಗೆಲ್ಲ ಎಷ್ಟು ಉತ್ಸಾಹ ಮಕ್ಕಳಿಗೆ! ಪುಸ್ತಕದ ಚೀಲಗಳನ್ನು ಮನೆಯಲ್ಲೇ ಬಿಟ್ಟು, ಕರ್ಚೀಫೊನ್ದನ್ನೇ ಕೈಯಲ್ಲಿ ಹಿಡಿದುಕೊಂಡೋ.. ಜೇಬಿಗೆ ತುರುಕಿಕೊಂಡೋ.. ಬಂದ ಬಣ್ಣ-ಬಣ್ಣದ ಅಂಗಿಯ ಮಕ್ಕಳಿಗೆ ಬೆಳಗಿನಿಂದಲೇ ಏನೋ ಸಂಭ್ರಮ..
ಒಂದೊಂದು ಚೌಕಳಿಯಲ್ಲಿ ಒಬ್ಬೊಬ್ಬರು ಎಂಬ ಹಾಗೆ ಸಾಲು-ಸಾಲಾಗಿ ನೆಲದ ಮೇಲೆ ಕುಳಿತು ಕೊಳ್ಳುವಾಗ ಪ್ರೀತಿಯ ಗೆಳತಿಯರು ತಮ್ಮ ಅಕ್ಕ-ಪಕ್ಕದಲ್ಲೇ ಕೂರಬೇಕು ಎಂಬ ತವಕ ಜೊತೆಗೆ. ತಮ್ಮ ತಮ್ಮ ಅನಿಸಿಕೆಗಳನ್ನು ಪರಸ್ಪರ ಪಿಸುಗುಡುವ ಮತ್ತೆ ಯಾವುದಕ್ಕಾದರೂ ಕಿಸಕ್ಕನೆ ನಗುವ ಅವಕಾಶವಿತ್ತಲ್ಲ ಅಲ್ಲಿ, ಅದಕ್ಕೆ!
ಹುಡುಗರೆಲ್ಲ ಹಾಲಿನ ಬಲ ಭಾಗಕ್ಕೆ ಮತ್ತೆ ಹುಡುಗಿಯರೆಲ್ಲ ಎಡಭಾಗಕ್ಕೆ ಕೂರಬೇಕು. ಆ ಕಡೆ, ವೇದಿಕೆಯಲ್ಲಿ ಭಾಷಣ ಮಾಡಲು ಆಯ್ಕೆಗೊಂಡ ರಾಜೆಶನಿಗೋ..ಶಶಿಧರನಿಗೋ, ಈ ಕಡೆ ಜಯಂತಿಗೋ..ಶ್ಯಾಮಲಗೋ.. ಮೈಯೆಲ್ಲಾ ಗಡಿಬಿಡಿ, ನಡುಕ.
ಗಳಿಗೆಗೊಮ್ಮೆ ಬರೆದು ತಂದ ಪುಟಗಳನ್ನೂ ತಿರುವುತ್ತ, ಹಣೆಯ ಮೇಲಿನ ಮಣಿಸಾಲು ಒರೆಸುತ್ತಾ, ವೇದಿಕೆಗೂ ಅಲ್ಲಿಂದ ಮುಖ್ಯ ಬಾಗಿಲಿಗೂ ಕ್ಷಣ-ಕ್ಷಣ ಕಣ್ಣು ಹೊರಳಿಸುತ್ತ..ಕಾಯುವುದೇ ಅವರ ಕೆಲಸ. ಇನ್ನುಳಿದವರಿಗೆ ಗುಸು..ಗುಸು, ಏನೋ ಮಾತು.
ಹಗುರವಾಗಿ ಮೂಗಿನತ್ತ ತೇಲಿ ಬರುವ ಊದಿನಕಡ್ಡಿಯ ಪರಿಮಳದ ಜೊತೆಗೆ ಹೆಣ್ಣುಮಕ್ಕಳ ತಲೆಯ ತರಹೇವಾರಿ ಹೂಗಳ, ಹಚ್ಚಿದ ಕೊಬ್ಬರಿ ಎಣ್ಣೆಯ ವಾಸನೆ..
ಅಷ್ಟರಲ್ಲಿ ಇದ್ದಕ್ಕಿದ್ದಂತೆ ಏನೋ ಗಡಿಬಿಡಿ, ಎಲ್ಲ ಕಡೆಗಳಿಂದ. ಹೂಗುಚ್ಛ, ಹಾರಗಳ ಹಿಡಿದು ಮಾಸ್ತರುಗಳ ಓಡಾಟ.. ಮುಖ್ಯ ಅತಿಥಿಗಳ ಆಗಮನ. ಊರಿನ, ಅಥವಾ ಪರಊರುಗಳ ಹಿರಿಯರೇ ಈ ಸ್ಥಾನಗಳನ್ನು ಅಲಂಕರಿಸುವವರು ಹೆಚ್ಚಾಗಿ.
ವೇದಿಕೆಗೆ ಎಲ್ಲರೂ ಬಂದ ಮೇಲೆ ಹಾರಾರ್ಪಣೆ, ಚಪ್ಪಾಳೆಗಳು, ಮತ್ತೆ ದಟ್ಟ ಬಣ್ಣದ, ದೊಡ್ಡ ದೊಡ್ಡ ಹೂಗಳ ಲಂಗ ಧರಿಸಿದ ಪುಟ್ಟ ಪುಟ್ಟ ಹೆಣ್ಣುಮಕ್ಕಳಿಂದ ಪ್ರಾರ್ಥನೆ. ಎಷ್ಟು ಕತ್ತು ಮೇಲೆತ್ತಿದರೂ ಮೈಕಿನ ಹತ್ತಿರ ಹೋಗಲಾಗದ ಕತ್ತುನೋವಿನಿಂದ ನಡುನಡುಗುವ ಸ್ವರಗಳು, ಸ್ವಲ್ಪ ದೂರದಿಂದಲೇ ಎಂಬಂತೆ ಕೇಳುವುದು.. - " ವಂದಿಪೆ ನಿನಗೆ ಗಣನಾಥ.. ಮೊದಲೊಂದಿಪೆ....."



(ಮುಂದುವರಿಯುವುದು.)

2 comments:

  1. nimma gayana dashte chanda ide baraha...i love both...good one.

    ReplyDelete
  2. ನಿಮ್ಮ ವಿಶ್ವಾಸದ ಅನಿಸಿಕೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಮಿತಾ ಅವರೇ... :)
    ಬರೆಯುತ್ತಿರಿ... ಪ್ಲೀಸ್..

    ReplyDelete