Friday 19 November 2010

ನೆನಪು - ೪


ಮನಸ್ಸಿಗೆ ಹತ್ತುವಂತೆ ಉತ್ತಮ ರೀತಿಯಲ್ಲಿ ಪಾಠ ಮಾಡುತ್ತಿದ್ದವರು ಗಣೇಶ ಮಾಸ್ತರರು. ಶಾಲೆಯ ವಾರ್ಷಿಕ ಪತ್ರಿಕೆ ' ತೊದಲುನುಡಿ'ಗೆಂದು ಕತೆ-ಕವನ-ಚುಟುಕು ಮತ್ತೆ ಪ್ರಬಂಧಗಳನ್ನು ಅವರ ಕೈಗೊಪ್ಪಿಸುತ್ತಿದ್ದಾಗ ಮೆಚ್ಚುಗೆ-ಸಂತೋಷ ವ್ಯಕ್ತ ಪಡಿಸಿದ್ದರು.

ಇವರ ಕಣ್ಣುಗಳು ವಿದ್ಯಾರ್ಥಿನಿಯರ ಮೇಲೆ ಸ್ವಲ್ಪ ಹೆಚ್ಚೇ ಎಂಬಂತೆ ಓಡಾಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯ. ಮತ್ತು ಒಂಥರಾ ಕಸಿವಿಸಿ..ಮುಜುಗರ.

ಪಾಠ ಮಾಡುತ್ತಾ ನಡುನಡುವೆ ಎಲ್ಲಾದರೂ ಕಣ್ಣಿಗೆ ಕಣ್ಣು ಸೇರಿದಾಗ ಪಟಕ್ಕನೆ ಸಣ್ಣದಾಗಿ ಕಣ್ಣು ಹೊಡೆಯುವುದು ಇವರ ಚೇಷ್ಟೆಗಳು. ( ಮುಖ ನೋಡದ ಹೊರತು ಪಾಠದಲ್ಲಾಗಲಿ ಆಡುವ ಮಾತಿನಲ್ಲಾಗಲಿ ಏಕಾಗ್ರಹಿಸುವುದು ನನ್ನಂತವರಿಗೆ ಸ್ವಲ್ಪ ಕಷ್ಟ! ) "ಬೆಕ್ಕು ಕಣ್ಣು ಮುಚ್ಚಿ.... " ಗಾದೆಯನ್ನು ಇವರು ಕೇಳೆ ಇರಲಿಲ್ಲವೇನೋ !

ಪರೀಕ್ಷೆಯ ನಂತರ ಉತ್ತರ ಪತ್ರಿಕೆ ಹಂಚುವಾಗ, ಹೆಸರು ಕರೆದಾಕ್ಷಣ ಮೇಜಿನ ಹತ್ತಿರ ಹೋಗುವುದಕ್ಕಿತ್ತಲ್ಲ, ಆಗ ಉತ್ತರ ಪತ್ರಿಕೆ ಕೊಡದೆ ಹತ್ತಿರ ಹತ್ತಿರ ಇನ್ನೂ ಹತ್ತಿರ ಕರೆದು ಭುಜದ ಮೇಲೆ ಕೈ ಬಳಸಿ ತಂದು ಮೈಗಾನಿಸಿಕೊಂಡು, ಅದೂ ಇದೂ ತಪ್ಪು-ಸರಿಗಳ ವಿಮರ್ಶೆ ಮಾಡುತ್ತ ರಟ್ಟೆಯ ಮೇಲೆ ಕೈಬೆರಳುಗಳಿಂದ ಬಿಗಿಯಾಗಿ ಒತ್ತಿ ನೋಯಿಸದಿದ್ದರೆ ಅವರಿಗೆ ತಿಂದ ಅನ್ನ ಮೈಗೆ ಹಿಡಿಯುತ್ತಿರಲಿಲ್ಲವೇನೋ..

ಆವಾಗೆಲ್ಲ ಕಣ್ಣಲ್ಲಿ ನೀರು..ಮನಸಲ್ಲಿ ಹಿಡಿ ಶಾಪ. ನೋಯಿಸಿಕೊಂಡವರಿಗೆ ಗೊತ್ತು ಆ ಕಷ್ಟ! ನೋಡುತ್ತಿರುವ ಇತರ ವಿದ್ಯಾರ್ಥಿಗಳಿಗೆಲ್ಲ ಆಟಕ್ಕೊಂದು-ಮಾತಿಗೊಂದು ಸುಲಭ ವಸ್ತು!

ಕೆಲವೊಮ್ಮೆ ಅವರ ಅನಿರೀಕ್ಷಿತ ಕಚಗುಳಿಗೆ, ತಡೆಯಲಾಗದೆ ನಕ್ಕುಬಿಟ್ಟರಂತೂ ಮುಗಿಯಿತು! - ಗಣೇಶ ಮಾಸ್ತರರ ಹೆಸರಿನ ಜೊತೆ ಅವರ ಹೆಸರುಗಳು ಮಾರನೆಯ ದಿನವೇ ಅಥವಾ ಮುಂದಿನ ದಿನಗಳಲ್ಲಿ ಶಾಲೆಯ ಹಿಂದಿನ ಗೋಡೆಗಳಲ್ಲಿ ವಿರಾಜಮಾನ ಕಟ್ಟಿಟ್ಟಿದ್ದೇ.

ಆರು-ಏಳನೆಯ ತರಗತಿಯ ಹೆಣ್ಣು ಮಕ್ಕಳಲ್ಲಿ ಹಲವರು ಈ ಕಾರಣ ಹಲವಾರು ರಾತ್ರಿಗಳ ನಿದ್ದೆ ಬಿಟ್ಟಿರಬಹುದೆಂದು ನಿಶ್ಚಯವಾಗಿಯೂ ಹೇಳಬಹುದು.

ಇನ್ನು ಡ್ರಿಲ್ ಮಾಸ್ತರು, ಹಿಂದಿ ಟೀಚರು ನೆನಪಾಗುತ್ತಾರೆ.

ಹಿಂದಿ ಟೀಚರು ಕಥೆ ಪುಸ್ತಕಗಳಲ್ಲಿ ಓದುತ್ತಿದ್ದ ಹಾಗೆ - ತೆಳ್ಳಗೆ..ಬೆಳ್ಳಗೆ ನೀಳ ಜಡೆ..ಪುಟ್ಟ ಶರೀರ.. ಬಣ್ಣ-ಬಣ್ಣದ ಹೂಗಳ ಸೀರೆ, ತೆಳ್ಳಗಿನ ಬಿಳಿಯ ಕೈಗೆ ಕಪ್ಪು ರಿಸ್ಟ್ ವಾಚು, ಹೆಗಲ ಮೇಲಿಂದ ಹಾಕಿಕೊಳ್ಳುತ್ತಿದ್ದ ಕಪ್ಪು ಹ್ಯಾಂಡ್ ಬ್ಯಾಗು, ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಹಾಕಿದರೂ ನೀಟಾಗಿ ಬಾಚಿ ಹೆಣೆದ ಉದ್ದ ಜಡೆ. ಒಟ್ಟಿನಲ್ಲಿ ನೀಟು-ನೀಟಾಗಿ ಕಾಣುವವರು, ಮತ್ತು ಶಿಸ್ತಾಗಿ ಪಾಠ ಮಾಡುತ್ತಿದ್ದವರು ಕೂಡಾ.

ಆದರೆ ' ಛೇ ' ಎಂದನ್ನಿಸುತ್ತಿದ್ದುದು ಅವರ ಕೊಂಚ ಉಬ್ಬಿದ ಹಲ್ಲು, ಮತ್ತೆ ಅದರ ಮೇಲಿನ ಕಪ್ಪು ಗರಗಸದಂತೆ ಕಾಣುತ್ತಿದ್ದ ಸರಿಗೆಯ ಪಟ್ಟಿ. ಮತ್ತೆ ಪಾಠ ಮಾಡುತ್ತಿದ್ದಾಗ ಬಾಯ ಎರಡೂ ತುದಿಗಳಲ್ಲಿ ಒಸರುತ್ತಿದ್ದ ಎಂಜಲು..
ಆಗೆಲ್ಲ ಅವರನ್ನು ನೋಡುತ್ತಿದ್ದ ಮಕ್ಕಳೇ ಅವರ ಪರವಾಗಿ ಎಂಜಲು ನುಂಗಿಕೊಳ್ಳುತ್ತಿದ್ದಿದ್ದು..

ಅವರೆಷ್ಟು ಪುಟ್ಟ ಆಕಾರವೆಂದರೆ ಸಿಟ್ಟು ಬಂದಾಗ ಸ್ಕೇಲನ್ನು ಕೈಗೆತ್ತಿಕೊಂಡು ಜೋರು ಮಾತಾಡುತ್ತಿದ್ದರೆ, ಕೈ, ಕೈಯಲ್ಲಿನ ಸ್ಕೇಲು, ಅಷ್ಟಲ್ಲ, ಇಡಿಯ ಮೈಯೆಲ್ಲ ಥರ ಥರ ಕಂಪನ. ಆಗೇನಾದರೂ ಅವರನ್ನು ಸ್ವಲ್ಪ ಜೋರಾಗಿ ದೂಡಿದಿರೋ, ಅಥವಾ 'ಫೂ..' ಎಂದೇನಾದರೂ ಗಾಳಿಯೂದಿದಿರೋ, ಬಿದ್ದೇ ಬಿದಬಹುದಾದಷ್ಟು ಪುಟಾಣಿ ಜೀವ!

ಏನಿದ್ದರೂ ದಿನ ಬಿಟ್ಟು ದಿನ ಅವರು ಮುಡಿದುಕೊಳ್ಳುತ್ತಿದ್ದ ಥರ-ಥರದ ಹೂವುಗಳು.. ಅದರಲ್ಲೂ ನೀರ ಹನಿ ಹೊತ್ತು ಎರಡೇ ಎರಡು ಹಸಿರೆಲೆಯ ನಡುವೆ ನಗುವ ಪನ್ನೀರ ಗುಲಾಬಿ..ನೋಡುವುದೇ ಕಣ್ಣಿಗೊಂದು ಹಬ್ಬ!

ಇನ್ನು ಡ್ರಿಲ್ ಮಾಸ್ತರ ಬಗ್ಗೆ ಬರೆಯುವುದಾದರೆ ಅವರು ವಾರದಲ್ಲಿ ಎರಡು, ತಪ್ಪಿದರೆ ಮೂರು ದಿನ ಮಾತ್ರವೇ ಕಾಣುತ್ತಿದ್ದುದು.


(ಮುಂದುವರಿಯುವುದು...)