Monday 25 October 2010

ನೆನಪಿನ ಪಡಸಾಲೆ - 2


ಮುಂದೆ ಇರುವುದು ಕಾಯರತಾಯರ ಹೋಟ್ಲು. ಅದು ಸ್ವಲ್ಪ ಎತ್ತರಕ್ಕೆ ಇನ್ನೊಂದು ರಸ್ತೆ ಅಂಚಿಗಿದೆ. ಅವರ ಹೋಟ್ಲಿನಲ್ಲಿ ಸದ್ದುಗಳು ತುಂಬಾ ಕಮ್ಮಿ - ಜನರೇ ಹೋಗುವುದಿಲ್ಲವೇನೋ ಎಂಬ ಹಾಗೆ !
ಕರಿದ ಬನ್ಸು - ಗೋಳಿಬಜೆಗಳ ಪರಿಮಳ ಎಂದೂ ಹೊಸಿಲು ದಾಟಿ, ಹಿಂದಿನ ಮಾಡು ದಾಟಿ ಈಚೆ ಬಂದ ನೆನಪಿಲ್ಲ..
ಆದರೆ ಬರಿ ಹೆಗಲ ಮೇಲೆ ಹೊದ್ದ ಕೆಂಪು ತೋರ್ತಿನಿಂದ ಗಡ್ಡ - ಮುಖ ಒರೆಸುತ್ತಲೇ ಇರುತ್ತಿದ್ದ ದೊಡ್ಡ ಕಣ್ಣುಗಳ ಮತ್ತು ಸೌಮ್ಯ ವ್ಯಕ್ತಿ ಎನ್ನಬಹುದಾದ ಕಾಯರತಾಯರು ಮಾತ್ರ ಹೋಟ್ಲೊಳಗೆ ಶತ - ಪಥ ಓಡಾಡುತ್ತಿದ್ದುದನ್ನು ಹಲವು ಬಾರಿ ನೋಡಿದ್ದು ನೆನಪಿದೆ !
ಅದರಾಚೆಗೆ ' ಮಮ್ಮದೆ 'ಯ ಅಡಕೆ ವ್ಯಾಪಾರ. ಅದಕ್ಕೆ ತಾಗಿ ಇನ್ನೂ ಸ್ವಲ್ಪ ಎತ್ತರಕ್ಕಿರುವುದೇ ಪೋಸ್ಟ್ ಆಫೀಸು ಹಾಗೂ ರೇಶನ್ನಂಗಡಿ. ಸ್ವಲ್ಪ ಸಾಣೆ ತಲೆಯ ಪೋಸ್ಟ್ ಮಾಸ್ತರರಿಗೆ ಎಲೆ ಅಡಕೆ ಜಗಿಯುವುದರ ಜೊತೆಗೆ ಊರಿಗೆ ಬಂದ
ಪತ್ರಗಳನೆಲ್ಲ ಓದುವ ಅಭ್ಯಾಸವೆಂದು ಜನ ಬಾಯಿಗೆ ಕೈ ಅಡ್ಡ ಹಿಡಿದು ಕಿವಿಯಿಂದ ಕಿವಿಗೆ ಸಣ್ಣ ಸ್ವರದಲ್ಲಿ ಹೇಳುತ್ತಾ ನಗುತ್ತಿದ್ದುದನ್ನು ನೋಡಿದ್ದೇನೆ. ಹೇಳುವವರಿಗೇನು ಬಿಡಿ. ಆದರೆ ನೋಡಿದವರಾರೂ ಇಲ್ಲ .

ಇನ್ನು ಮುಂಚಿತದ್ಕದಲ್ಲಿ ಬಾಕಿ ಇರುವುದು ಅದೇ , ಚಿಕ್ಕುವಿನ ಬೀಡಿ ಅಂಗಡಿ. ಪೋಸ್ಟ್ ಆಫೀಸಿನ ಎದುರಿಗೆ ರಸ್ತೆಯ ಈ ಬದಿಗೆ, ಅಂದರೆ ' ಎಲ್ ' ಕೋನದ ಒಳಗಡೆಗೆ ಎನ್ನಬಹುದಾದ ಜಾಗದಲ್ಲಿ ಮುಳಿಹುಲ್ಲು ಹೊದೆಸಿದ ಒಂದು ಸಣ್ಣ ಗುಡಿಸಲದು.
ಬೀಡಿ ಎಲೆಗಳ ಸರಪರ.. ಮತ್ತೆ ಅದನ್ನು ಕಟ್ಟಿ ತರುವ ಹೆಣ್ಣುಮಕ್ಕಳ ಕೈ ಬಳೆಗಳ ಸದ್ದು ಅಲ್ಲಿ. ಇಪ್ಪತ್ಮೂರರ ಹರೆಯದ ಸ್ವಲ್ಪ ಬೆಳ್ಳನೆಯ ಹುಡುಗ, ಗಡ್ಡ - ಮೀಸೆ ಬೋಳಿಸಿ ಮಿರ - ಮಿರನೆ ಮಿಂಚುವ ಮುಖದ 'ಚಿಕ್ಕು'ವಿನ ಕಿಲಾಡಿ ಚಟಾಕಿಗಳಿಗೆ
ಪಕ್ಕನೆ ಉಕ್ಕಿ ಬರುವ ನಗೆಗಳ ಕಿಲಕಿಲ ಕಚಗುಳಿ ಅಲ್ಲಿ. ಮುಂಚಿತದ್ಕಕ್ಕೆ ಬರುವ - ಹೋಗುವ ಎಲ್ಲರ ಕಣ್ಣುಗಳೂ ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಅತ್ತ ಹಾಯದಿರುವುದಿಲ್ಲ.

ಮುಂಚಿತಡ್ಕ ದ 'ಎಲ್ ' ಆಕೃತಿಯನ್ನು ಪೂರ್ಣವಾಗಿ ಒಮ್ಮೆಲೇ ನೋಡಬೇಕಾದರೆ ಅಲ್ಲಿಂದ ಮೇಲಕ್ಕೆ ಶಾಲೆಗೇ ಹೋಗಬೇಕು. ಹೌದು. ಯಾಕೆಂದರೆ ಅದು ಗುಡ್ಡದ ತುದಿಯಲ್ಲಿದೆ. ಆದರೆ ತುತ್ತ ತುದಿಯಲ್ಲಲ್ಲ, ಗುಡ್ಡದ ಅರ್ಧ ಭಾಗದಷ್ಟೆತ್ತರಕ್ಕಿದೆ.
ಅದು ಮುಂಚಿತಡ್ಕ ಅಪ್ಪರ್ ಪ್ರೈಮರಿ ಶಾಲೆ. ಅಲ್ಲಿಗೆ ಗುಡ್ಡದ ಎರಡೂ ಕಡೆಗಳಿಂದ ಹಾವಿನ ರೀತಿ ಮಡಿ ಮಡಿಚಿ ಹರಿವಂತ ಮಣ್ಣಿನ ಮಾರ್ಗಗಳಿವೆ. ನಡುವಿನಲ್ಲಿ ಮಕ್ಕಳು ಹತ್ತಬಹುದಾದ ಹತ್ತಿರದ ನೇರ ದಾರಿ ಇದೆ. ಈ ದಾರಿಯಲ್ಲಿ ಎಲ್ಲರಿಗೆ
ನಡೆಯಲು ಕಷ್ಟವಾಗುತ್ತದೆ. ಹೆಜ್ಜೆ - ಹೆಜ್ಜೆಗೂ ಜಾರಬಹುದಾದ ಈ ಮಣ್ಣಿನ ದಾರಿಯಲ್ಲಿ ತೀರಾ ನೆಟ್ಟಗೆ ಎಂಬಂತೆ ಗುಡ್ಡ ಹತ್ತಬೇಕು ! ಇದು ಮಕ್ಕಳಿಗೆಲ್ಲ ಬಹು ಪ್ರಿಯವಾದ ದಾರಿ. ಇದರಲ್ಲಿ ಒಂದೇ ಒಂದು ಸರಿಯಾದ ದಾರಿ ಎಂಬಂತಿಲ್ಲ, ನಡೆದದ್ದೇ
ದಾರಿ ಎಂಬ ಹಾಗೆ ಹರಡಿಕೊಂಡವುಗಳಲ್ಲಿ ಯಾವುದನ್ನು ಆರಿಸಿ ನಡೆದರೂ ಹತ್ತು ಹೆಜ್ಜೆಗಳ ನಂತರ ಕಾಲೆಳೆತ.. ಏದುಸಿರು.. ಸೊಂಟನೋವೆ! ಹತ್ತಿರದ ಈಟಿಮರಗಳ ಗೆಲ್ಲುಗಳನ್ನು ಹಿಡಿವ ಸಹಾಯ ಸಿಕ್ಕರೂ ಗಕ್ಕನೆ ಅವೂ ಕಿತ್ತು ಕೈಗೆ
ಬಂದರೆ ನಿಲ್ಲಲಾಗದೆ ಕೆಳಗುರುಳಬೇಕಷ್ಟೆ !!
ಶಾಲೆಯ ಈ ದಾರಿಯಲ್ಲೇ ಇದೆ, ಪ್ರೀತಿಯ ಬೃಂದಾವನ ! ಶಾಲೆಯ ಗೆಳೆಯ - ಗೆಳತಿಯರೆಲ್ಲ ಸೇರಿ ಕಟ್ಟಿದ ಹೂತೋಟ. ಲಂಬಾನ, ಬೋಗನ್ ವಿಲ್ಲಾ ದ ದಟ್ಟ ಬೇಲಿಯೊಳಗೆ ಹೆಂಚಿನ ಚೂರುಗಳ ಸುಂದರ ಪಾತಿಗಳಲ್ಲಿ ಅವರವರ ಮನೆಗಳಿಂದಲೇ
ತಂದ ಹೂಗಿಡಗಳ ಹೊಸ ಜೀವನದಧ್ಯಾಯಗಳು ! ಬಣ್ಣ - ಬಣ್ಣಗಳ ಗೋರಂಟಿ.. ನಂದಿಬಟ್ಟಲು.. ಶಂಖಪುಷ್ಪ.. ದಾಸವಾಳ.. ಬಿಳಿ - ನೇರಳೆ ಕಣಗಿಲೆಗಳು , ಒಂದೆರಡು ಕಸಿ ಗುಲಾಬಿಗಳು.., ಗೊಂಚಲ ಬಿಳಿ - ಪನ್ನೀರ್ ಗುಲಾಬಿಗಳು .. ಹೀಗೆ.
ತೋಟ ದಾಟಿ ಇನ್ನಾರು ಹೆಜ್ಜೆ ಹತ್ತಿದರೆ ಬಂತು ಶಾಲೆಯಂಗಳ ! ಮುಂಚಿತಡ್ಕದ ಹಾಗೆ ' ಎಲ್ ' ಆಕೃತಿಯ ಕಟ್ಟಡ ಈ ಶಾಲೆಯದ್ದು ಕೂಡಾ ! ಶಾಲೆಯ ಹಿಂದೆ ಇನ್ನೂ ಸ್ವಲ್ಪ ಎತ್ತರಕ್ಕೆ ಆಟದ ಮೈದಾನ. ಆಹಾ.. ಈ ಮೈದಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಶಾಲಾ ವಾರ್ಷಿಕೊತ್ಸವವಂತೂ ಸವಿದಷ್ಟೂ ಸವೆಯದ ಕಲ್ಲುಸಕ್ಕರೆಯ ಹಾಗೆ , ಸಿಹಿಯೋ..ಸಿಹಿ !

ಹೆಡ್ಮಾಸ್ತರರನ್ನೂ ಸೇರಿಸಿ ಒಂಭತ್ತೋ..ಹತ್ತು ಜನ ಅಧ್ಯಾಪಕರು ಶಾಲೆಯಲ್ಲಿ. ಅವರಲ್ಲಿ ಒಬ್ಬರು ಹಿಂದಿ ಟೀಚರು. 'ಟೀಚರು' ಎಂದರೆ ಅದು ಕೇವಲ ಅಧ್ಯಾಪಕಿಯರಿಗೆ ಮೀಸಲಾದ ಪದವೆಂಬಂತಿತ್ತು ಅಲ್ಲಿ. ಅಧ್ಯಾಪಕರೆಲ್ಲ 'ಮಾಸ್ತರರು' ಎಂದೇ
ಕರೆಸಿಕೊಳ್ಳುತ್ತಿದ್ದರು. ಪಾಠ ಹೇಳಿಕೊಡುವುದರಲ್ಲಿ ಒಬ್ಬೊಬ್ಬರದೂ ಒಂದೊಂದು ಶೈಲಿ...


( ಮುಂದುವರಿಯುವುದು )

2 comments:

  1. idu nammureno endu anisuthide.anubavisi bareda hage.sogasagide.

    ReplyDelete
  2. Idu engala shale , engala oorina chitra. Baraddady layakkayidu . Munde innu bare .Shubhashayagalu

    ReplyDelete