Monday 6 June 2011

ನೆನಪು - ೮


'ದೇಯಿ' ಒಳ್ಳೆಯ ಜಾನಪದ ಸೊಗಡಿದ್ದವಳು. ಅವಳ ಮಕ್ಕಳಿಗೂ ಹಾಡುವ ಹುಚ್ಚು. ದೊಡ್ಡವನು ಚನಿಯ, ಎರಡನೆಯವನು ಪುಟ್ಟ

ಮತ್ತೆ ಕೊನೆಯವನು ಬಸವ.


ಚನಿಯ ಗಿಡ್ಡ ಶರೀರದವನು, ದಪ್ಪಗಿದ್ದ, ದಪ್ಪ ಮೀಸೆ ಕೂಡಾ ಬಿಟ್ಟಿದ್ದ. ಅವನದ್ದು ಸಾಮಾನ್ಯವಾಗಿ ಸಂಜೆಯ ಏಳು - ಎಂಟರ ನಂತರ ಬಿದಿರಿನ ಕೊಳಲುವಾದನ!

ಅದು ಎಲ್ಲಿಂದಲೋ ಶುರುವಾಗಿ ಮತ್ತೆ ಅಲೆ - ಅಲೆ ಹೊರಳಿ ಹೇಗೋ ಹೇಗೋ ಸುತ್ತುತ್ತ ಸಾಗಿ ಮತ್ತೆಲ್ಲೋ..ಕೆಲ

ನಿಮಿಷ ನಿಂತೇ ಇದ್ದು, ಒಂದು ರೀತಿಯ ಮೋಡಿ ಹಿಡಿಸಿ ಮತ್ತೊಮ್ಮೆಇದ್ದಕ್ಕಿದ್ದ ಹಾಗೆ ಧಡಕ್ಕನೆ ನಿಂತೇ ಬಿಡುತ್ತಿತ್ತು!!

ಬಸವ ಮುಖದಲ್ಲೆಲ್ಲ ಸಿಡುಬಿನ ಕಲೆಗಳಿದ್ದವನು. ಬಹಳ ರಾಗವಾಗಿ ಸಿಳ್ಳೆ ಹಾಕುತ್ತಿದ್ದ.

ಇನ್ನು ನಡುವಿನವನು ಪುಟ್ಟ ಮಾತ್ರ " ಎಂದೆಂದೂ ನಿನ್ನನು ಮರೆತೂ...

" ಎಂದು ಕೇಳಿದವರು ಮೈ ಮರೆಯುವಂತೆ ಹಾಡುತ್ತಿದ್ದ!


ಆದರೆ ಪುಟ್ಟನ ಹಾಡು ಕೇಳಿ ಮೈ ಮರೆಯುವ ಹೆಚ್ಚು ಅವಕಾಶ ಸಿಗುತ್ತಾ ಇದ್ದಿದ್ದು 'ಬೆಕ್ಕಿನ ಕಣ್ಣಿನ' ನೀರಜನಿಗೆ!


ನೀರಜ ರಾಮನಾಯ್ಕ'ನ ಮಗಳು. ಅವಳ ಮನೆ 'ಗೆದ್ಲು ಮೂಲೆ'ಯ ದಾರಿಯಲ್ಲಿ 'ಬಾಂಡ್ಲ ಹೊಂಡ'ವನ್ನು ಬಳಸಿ

ಬರುವಾಗ ಸಿಗುತ್ತದೆ. (ಇದು ಮೊದಲೇ ಹೇಳಿದಂತೆ ಉಯ್ಯಡ್ಕಕ್ಕೆ ನೇರ ಗುಡ್ಡ ಹತ್ತಿ ಹೋಗುವ ದಾರಿ. ಮತ್ತೆ

ದಾರಿಯನ್ನೇ ಹೆಚ್ಚಾಗಿ ಎಲ್ಲರೂ ಬಳಸುತ್ತಿದ್ದಿದ್ದು.)


ಅಬ್ಬಾ, ಆ ಬಾಂಡ್ಲ ಹೊಂಡವೇ!!


ಹೇಗೆ ಅಲ್ಲಿ ಅಷ್ಟ ದೊಡ್ಡ ಹೊಂಡ ವಾಯಿತೆಂದೇ ಅರ್ಥವಾಗುವುದಿಲ್ಲ! ಗುಡ್ಡದ ಒಂದು ಮೈಯೆ ಎಂಬಂತೆ ಇಳಿಜಾರಿನಲ್ಲಿದ್ದ ಆ ದೊಡ್ಡ ಹೊಂಡದ ಬದಿಯಲ್ಲೇ ದಾರಿ!

ಬಗ್ಗಿ ನೋಡಿದರೆ ಭಯ ಹುಟ್ಟಿಸುವ ದಟ್ಟಪೊದೆಗಳು... ತರ ತರದ ಕಪ್ಪು ಹಸಿರು ಛಾಯೆಗಳು.. ಮಳೆಗಾಲದಲ್ಲಿ ಗುಡ್ಡದ ನೀರೆಲ್ಲ ಹರಿದು ಹಲವು ಸಾಲಾಗಿ ಹೊಂಡದೊಳಗೆ ಬಿದ್ದು ಮಾಯವಾದಂತೆ ಭಾಸವಾಗುತ್ತಿತ್ತು!
(ಇದರೊಳಗೆ ಬಿದ್ದರೆ ಹೇಗಿರಬಹುದೆಂಬ ಯೋಚನೆಗಳು ಪ್ರತಿ ಬಾರಿ ಬಗ್ಗಿದಾಗಲು ಬಾರದೆ ಇರುತ್ತಿರಲಿಲ್ಲ! :)

ಇರಲಿ.. ಅಲ್ಲಿಂದ ಗುಡ್ಡ ಹತ್ತಿ ಬರುವಾಗ ಅಂಬಟೆಕೊಚ್ಚಿಗೂ ಮೊದಲೇ ರಾಮನಾಯ್ಕನ ಮನೆ

ಸಿಗುತ್ತದೆ. ಅವನಿಗೂ ಬೆಕ್ಕಿನ ಕಣ್ಣು, ಉದ್ದ ಶರೀರ.. ಬಿಳೀ ಮೈಬಣ್ಣ.

ಆದರೆ ಅವನ ಕಣ್ಣು ಸದಾ ಆಲಸ್ಯವಿದ್ದಂತೆ. ತೇಲುಗಣ್ಣು. ಮತ್ತೆ ಮಾತು ಒಂದು

ರೀತಿಯ ತೊದಲು. ಅದಕ್ಕೆ ಅವನ ಮುಂದೆ ಮಾತಿಗೆ ನಿಂತರೆ ಮೈಯೆಲ್ಲಾ ಪರಚಿಕೊಳ್ಳುವ ಹಾಗೊಂದು ಇರುಸು ಮುರುಸು.

ನೀರಜನೂ ಹಾಗೇ ಎತ್ತರ.. ಬಿಳೀ ಬಣ್ಣ, ತೊದಲುಮಾತು. ಸುರುಳಿಗೂದಲ ಮೋಟುಜಡೆಯವಳು .

ಅವಳು ಮನೆಯಲ್ಲೇ 'ಬೀಡಿ ಕಟ್ಟುವ' ಕೆಲಸ ಮಾಡುತ್ತಿದ್ದವಳು, ಹಾಗಾಗಿ ಪುಟ್ಟನ ಹಾಡುಗಳನ್ನು ಹೆಚ್ಚಾಗಿ ಕೇಳಿಸಿಕೊಳುತ್ತಲೇ ಇರುತ್ತಿದ್ದಳು
,
ಮತ್ತೆ 'ಏರು ಜೌವನೆ' ನೀರಜ

-
ಪುಟ್ಟ ತನಗೆಂದೇ ಹೊಸ ಹೊಸ ಸಿನೆಮಾ ಗೀತೆಗಳನ್ನು ಕಲಿತು ಹಾಡುತ್ತಾನೆಂದು ಹುಸಿಮುನಿಸು ತೋರಿ ದೂರುತ್ತಿದ್ದವಳು!

ಇವಳ ಮನೆಯಿಂದ ಮುಂದೆ ಸ್ವಲ್ಪ ಮೇಲೆ ಬಂದರೆ ಅಲ್ಲೊಂದು ಸಣ್ಣ ನೀರಿನ 'ಒರತೆ ಗುಂಡಿ'.(ಕಪ್ಪೆ ಗುಂಡಿ) ಮತ್ತೂ

ಹತ್ತು ಹೆಜ್ಜೆ ಹತ್ತಿದರೆ ಬಂದೆ ಬಿಡುತ್ತದೆ ಉಯ್ಯಡ್ಕ ಬೌಂಡರಿ - ಕಲ್ಲಿನ ಅಗರು.

ಆದರೆ ದಾರಿಯುದ್ದಕ್ಕೂ ಹತ್ತುವುದೊಂದೇ ಕೆಲಸ! ಬೇಕಾದಾಗ ಒರತೆ ಗುಂಡಿ ಬಳಿ ಕೊಂಚ ವಿಶ್ರಾಂತಿ.

ಅಂದಹಾಗೆ, ಈ ದಾರಿಯಲ್ಲಿಯೇ ಒಮ್ಮೆ ಬರುವಾಗ ವಿಚಿತ್ರವೆನಿಸಿದ 'ಕಟ -

ಕಟ' ಸದ್ದು ಕೇಳಿದ್ದು, ಮರದ ಬೇರಿನ ಸಂದಿಯಲ್ಲಿ ದೊಡ್ಡದೊಂದು ಹೆಬ್ಬಾವಿನ ದರುಶನವಾದದ್ದು,

ಓಡಿ ಹೋಗಿ ಅಪ್ಪನಿಗೆ ತಿಳಿಸಿದ್ದು, ಅಪ್ಪ - 'ಸಾಯಿರ' (ಇಮಾಮನ ತಮ್ಮ) ನ ಜೊತೆ ಬಂದದ್ದು, ಅವರಿಬ್ಬರೂ

ದೊಡ್ಡ ಕೋಲಿಂದ ಹೆಬ್ಬಾವನ್ನು ತಿವಿದು,
ಅದು ದೊಡ್ಡದಾಗಿ ಬಾಯಿ ತೆರೆದಾಗ ಸಾಯಿರ ಬಲವೆಲ್ಲ ಪ್ರಯೋಗಿಸಿ, ಅದರ ತೆರೆದ ಬಾಯನ್ನು ಎರಡೂ

ಬದಿಗಳಿಂದ ಬಲವಾಗಿ ಅವುಚಿ ಮುಚ್ಚಿ ಹಿಡಿದು ಸುಮಾರು ದೂರದ ವರೆಗೂ
ಕಷ್ಟ ಪಟ್ಟು ಅದನ್ನೆಳೆದು ತಂದು ಕೊನೆಗೆ ಹೇಗೋ ಅದನ್ನೊಂದು ಗೋಣಿ ಚೀಲದೊಳಗೆ ಸೇರಿಸಿ ಮನೆಯಂಗಳಕ್ಕೆ

ಎಳೆದು ತಂದದ್ದು, ಮಾರನೆಯ ದಿನ ಅದನ್ನೊಂದು ಪ್ಲಾಸ್ಟಿಕ್ ಡ್ರಮ್ಮಿನೊಳಗಿಟ್ಟು ಶಾಲೆಗೆ

ತಂದು ಮಕ್ಕಳಿಗೆ 'ಪ್ರದರ್ಶನ'ಕ್ಕಿರಿಸಿದ್ದು..

ಜೊತೆಯ ಮಕ್ಕಳ ಆಶ್ಚರ್ಯಾತಂಕದ ಪ್ರಶ್ನೆಗಳಿಗೆಲ್ಲ, ಇಲಿಯನ್ನೋ ಮೊಲವನ್ನೋ ತಿಂದ ಹೆಬ್ಬಾವು ಮರದ

ಬೇರಿನ ಸಂದು-ಗೊಂದಿನಲ್ಲಿ ನಿಧಾನ ತೆವಳುತ್ತಿದ್ದಾಗ ಕೇಳಿಸಿದ ಸದ್ದಿನಿಂದ ಹಿಡಿದು ಕಥೆಯೆಲ್ಲವನ್ನೂ ಅತ್ಯಂತ ರೋಚಕವಾಗಿ

ಕಣ್ಣರಳಿಸಿ ಹೇಳಿದ್ದು..

ಅದೇ ದಾರಿಯ ಇನ್ನೊಮ್ಮೆ -

ಮೇಲೆ ಹಾರಾಡುತ್ತಿದ್ದ 'ಹೆಲಿಕಾಫ್ಟರ್'ನ ಭಯದಿಂದ ಸಂಗೀತ ತರಗತಿಯಿಂದ ಮರಳುತ್ತಿದ್ದ ದೊಡ್ಡಕ್ಕ ಕೊಡೆಯನ್ನು ಬಿಡಿಸಿ ಏದುಸಿರು ಬಿಟ್ಟಿದ್ದಳು!

ಅದು ಕೂಡಾ ಅಲ್ಲಿಯೇ, ಒರತೆಗುಂಡಿಯ ಪಕ್ಕದಲ್ಲಿಯೇ.

ಅಂದು ಅವಳುಟ್ಟಿದ್ದ ಕಿತ್ತಳೆ ಬಣ್ಣದ ಸೀರೆಯ ಒಡಲಲ್ಲೆಲ್ಲ ಕೆನೆಬಣ್ಣದ ಬಿಸ್ಕೆಟ್ಟುಗಳು..

ಅನಿರೀಕ್ಷೀತವಾಗಿ ಭರ್ರನೆ ಸದ್ದು ಮಾಡುತ್ತಾ ತಲೆಯ ಮೇಲಿಂದ ಹಾರಿ ಬಂದ ಸದ್ದಿಗೆ ಬೆಚ್ಚಿಬಿದ್ದ ಅಕ್ಕ
ಮೇಲಿಂದ ಹನಿ ಹನಿಯಾಗಿ ಬೀಳುತ್ತಿದ್ದ ಔಷಧಕ್ಕೆ ( ಎಂಡೋಸಲ್ಫಾನ್) ಹೆದರಿದಳೋ , ಅಂತೂ ಥಟ್ಟನೆ ಗಾಬರಿಗೊಂಡು ಕೊಡೆ ಬಿಚ್ಚಿ ಹಿಡಿದು,

ಮತ್ತೆ ಅದನ್ನು ಪಕ್ಕಕ್ಕೆ ಸರಿಸಿ, ಕತ್ತೆತ್ತಿ ಮೇಲೆ ನೋಡಿದ್ದನ್ನು ನೋಡಿ,
ಅಲ್ಲಿ ಮೇಲೆ ಹೆಲಿಕಾಫ್ಟರ್' ನೊಳಗಿದ್ದ ಯುವಕ ಮುಸಿ ಮುಸಿ ನಕ್ಕದ್ದು, ಮತ್ತೆ

ಆ ಹೆಲಿಕಾಫ್ಟರ್ ಐದಾರು ಬಾರಿ ಅದೇ ದಾರಿಯಾಗಿ ಹಾರಿದ್ದೆಲ್ಲ ತಪ್ಪದೆ ಗಮನಕ್ಕೆ ಬಂದದ್ದು.

ಆ ದಾರಿಯಲ್ಲಿ ಬಿದ್ದದ್ದಕ್ಕಂತೂ ಲೆಕ್ಖವಿಲ್ಲ. ದಾರಿ ಬಿಟ್ಟು, ಗುಡ್ದದಲ್ಲಿಲ್ಲಿಳಿದು ಕಾಡು ಮಾವಿನ ಹಣ್ಣು ಹೆಕ್ಕಿದ್ದು, ನೆಲ್ಲಿ ಕಾಯಿ, ಶಾಂತಿ ಕಾಯಿ, ಚೂರಿಮುಳ್ಳು

ಹಣ್ಣು, ಗೆರುಹಣ್ಣು, ನೇರಳೆ, ಪೇರಳೆ, ಒಂದೇ..ಎರಡೇ.. ಅವೆಷ್ಟು ಹಣ್ಣು - ಕಾಯಿಗಳು
ಪುಸ್ತಕ ಚೀಲದೊಳಗೆ, ಪೆನ್ಸಿಲ ಡಬ್ಬದೊಳಗೆ. ತಿಂದ ರುಚಿ ಬಾಯೊಳಗೆ, ತೃಪ್ತಿಯ ಖುಷಿ ಕಣ್ಣೊಳಗೆ!

5 comments:

  1. ಹೆಬ್ಬಾವಿನ ವಿವರಣೆ ನೈಜವಾಗಿತ್ತು.. ಶಾಲೆಗೆ ಹೋಗುವ ಸಾಧಾರಣ ಕ್ರಿಯೆಯನ್ನು till last detail ನೆನಪಿಸಿಕೊಂಡು ಅಕ್ಷರ ರೂಪಕ್ಕೆ ಇಳಿಸಿದ್ದು ಇಷ್ಟವಾಯಿತು.. ಯಾಕೋ ಬೇಂದ್ರೆಯವರ "ಇದು ಬರಿ ಬೆಳಗಲ್ಲೋ ಅಣ್ಣಾ" ನೆನಪಾಯಿತು... ಓದುಗನನ್ನು ನೆನಪಿನ ದೋಣಿಯಲ್ಲಿ ಕರೆದೊಯ್ದ ನಿಮಗೆ hats off!!!

    ReplyDelete
  2. ನೆನಪಿನ ಬುತ್ತಿ ಬಿಚ್ಚಿದರೆ ನೂರಾರು ಮರೆಯದ,ಮರೆಯಬಾರದ,ಮರೆಯಲಾರದ
    ಸಂಗತಿಗಳು.
    ಗತಕಾಲದ ಘಟನೆಗಳು ಮೆಲುಕುಹಾಕಿಕೊಂಡರೆ ಮೆತ್ತೆ ಮನಕ್ಕೆ ಮುದನೀಡುವ
    ಚಿರಂತನ ಒರತೆ.
    ಬತ್ತಲಾರದು,ಬತ್ತಬಾರದು,ಬತ್ತದಿರಲಿ ಎಂದೆಂದೂ..
    ಇನ್ನಷ್ಟು...ನೆನಪಿನ ಕಣಜದೊಳಗಿಂದ ಮೀರಿ..ತೂರಿ ಬರಲಿ.

    ReplyDelete
  3. ಧನ್ಯವಾದಗಳು ಜಯರಾಮ್.

    ಮಳೆಯ ದಿನಗಳಲ್ಲಿ 'ಬೇರ್ಕಡವು' ಮನೆಗೆ ಹೋಗಬೇಕೆಂದರೆ, ಹೊಳೆ ದಾಟಲು ಒಂದಡಿ ಅಗಲದ, ನಡುಗುವ ಸಂಕದಲ್ಲಿ ನಡುಗುತ್ತಲೇ ಹೋಗಬೇಕಿತ್ತಲ್ಲ! :)

    ಕೆಳಗೆ ಸರ-ಸರನೆ ರಭಸದಿಂದ ಹರಿವ ಕೆಂಪನೆ ನೀರ ಪ್ರವಾಹ ನೋಡುತ್ತಾ ತಲೆಯೂ ಗಿರ್ರೆನ್ನುತ್ತಿತ್ತಲ್ಲ!!! :) :)

    ReplyDelete
  4. ಅಣ್ಣಾ.. ( venkat ) ಖುಷಿಯಾತು, ನೀನು ಬರದ್ದು ಓದಿ! :)

    ಮನಸ್ಸಿಗೆ ಅನಿಸಿದ್ದು, ಬರಹಕ್ಕೆ ಬಂದದು.... :) :)

    ReplyDelete