Tuesday 5 July 2011

ನೆನಪು -- 9



ಮಂಚಿತಡ್ಕದ ಸಂಭ್ರಮದಲ್ಲಿ ಎರಡೋ ಮೂರೋ ವರ್ಷಕ್ಕೊಮ್ಮೆ ಬಂದು, ವಾರದ ತನಕ ಇಲ್ಲಿಯೇ ಬೀಡು ಬಿಡುವ ಸರ್ಕಸ್ ಪಾರ್ಟಿಗಳದ್ದು ಕೂಡಾ ಒಂದು ಪಾಲು!


ಸರ್ಕಾರಿ ಭಾವಿಯ ಹಿಂದೆ, ಮುತ್ತುವಿನ ಬೀಡಿ ಅಂಗಡಿಯ ಮುಂದೆ ಇರುವ ವಿಶಾಲ ಜಾಗದಲ್ಲಿ ಟೆಂಟು ಹೂಡಿ ಬಿಟ್ಟರಾಯಿತು . ಒಂದು ವಾರದ ವರೆಗೂ ಪ್ರತಿದಿನ ಸಾಯಂಕಾಲ ಅವರಾಡುವ ಆಟಗಳನ್ನು ನೋಡಲು ಅಕ್ಕ-

ಪಕ್ಕದ ಊರಿಂದ ಜನ ಜಮಾಯಿಸುತ್ತಾರೆ, ಹಬ್ಬಕ್ಕೆ ಬರುವವರಂತೆ.


ಆ ಸರ್ಕಸ್ ಪಾರ್ಟಿಯಲ್ಲಿರುವವರು ಕೆಲವೇ ಜನ.


ಸುಮಾರು ನಲವತ್ತೈದು - ಐವತ್ತು ವಯಸ್ಸಿನ.. ಬಕ್ಕತಲೆಯ.. ಅವರೆಲ್ಲರ ಯಜಮಾನನೆಂದು ಕರೆಸಿಕೊಳ್ಳುವಾತನೊಬ್ಬ, ಇನ್ನೊಬ್ಬಾತ ಸಣಕಲು ದೇಹದ ಯುವಕ,


ಇನ್ನೊಬ್ಬಳು ತೆಳ್ಳಗಿನ ಸೊಂಟದ, ಕಪ್ಪು ಮೈ ಬಣ್ಣದ ಮತ್ತು ಆಕರ್ಷಕ ಕಂಗಳ ಯುವತಿ, ಮತ್ತೆ ಇನ್ನು ಮೂವರು ಮಕ್ಕಳು. ಹ್ಞಾ... ಮರೆತೆ, ಅಂಗಿ ಚಡ್ಡಿ ತೊಟ್ಟ ಒಂದು ಮಂಗವಿರುತ್ತಿತ್ತು ಜೊತೆಯಲ್ಲಿ.


ಸಂಜೆ ಹೊತ್ತಿಗೆ ಡೈನಾಮೋ'ದ ಭರ್........ನಿಲ್ಲದ ಸದ್ದು.


ಅವರು ಉಳಿದುಕೊಳ್ಳುವ ಟೆಂಟಿನ ಮುಂದೆ ಒಂದು ಚಿಕ್ಕ ವೇದಿಕೆ. ಮತ್ತೆ ಅಲ್ಲೇ ಎದುರಿಗೆ ಸರ್ಕಸ್ ಪ್ರದರ್ಶನ.


ನಡುವೆ ಒಂದು ಎತ್ತರದ ಕಂಬ ನೆಟ್ಟು ಅದರ ತುದಿಗೆ ಮೈಕು ಕಟ್ಟಿ ನಿಲ್ಲಿಸಿ, ಸುತ್ತಲಿನ ಸಮತಟ್ಟು ಸ್ಥಳವನ್ನು ನಿರ್ಮಲಗೊಳಿಸಿ ಬಳ್ಳಿಯಿಂದಲೋ/ತಂತಿಯಿಂದಲೋ ವೃತ್ತಾಕಾರದಲ್ಲಿ ಬೇಲಿ ಕಟ್ಟಲಾಗುತ್ತಿತ್ತು


ಮತ್ತು ಬೇಲಿಯ ನಡು ನಡುವೆ ಟ್ಯೂಬು ಲೈಟುಗಳು.


ಸರ್ಕಸ್ಸು ಶುರುವಾಗುವುದಕ್ಕೆ ಸಾಕಷ್ಟು ಮೊದಲೇ ಮೈಕಿನಲ್ಲಿ ಗಜಮುಖನೆ ಗಣಪತಿಯೇ..ಶುರುವಾಗಿ ನಂತರದಲ್ಲಿ ಚಿತ್ರಗೀತೆಗಳ ಆರ್ಭಟೆ ಮುಂದುವರಿಯುತ್ತಿತ್ತು,


ಇನ್ನೂ ಕೆಲ ಗಂಟೆಗಳ ನಂತರ ಕತ್ತಲು ಮುತ್ತುವಾಗ ಕಟ್ಟಿದ ಬೇಲಿಯ ಒಳಗೆ, ಮೈಕು ಕಟ್ಟಿರುವ ಕಂಬಕ್ಕೆ ಸೈಕಲ್ಲಿನಲ್ಲಿ ಒಂದರ ನಂತರ ಒಂದೆಂಬಂತೆ ಸುತ್ತು ಹಾಕುತ್ತಾ ಹಲವಾರು ರೀತಿಯಲ್ಲಿ ಸೈಕಲ್ ತುಳಿಯುತ್ತ, ಸರ್ಕಸ್ ಶುರು...


ಜನರೆಲ್ಲಾ ಬೇಲಿಯಿಂದಾಚೆಗೆ ನಿಲ್ಲಬೇಕು.


ಯುವಕ ಸೈಕಲ್ ತುಳಿಯುತ್ತಿದ್ದಂತೆ ಓಡಿ ಬಂದ ಆ ಪುಟ್ಟ ಮಕ್ಕಳು ಅವನ ಇಕ್ಕೆಲಗಳಲ್ಲೂ ಹತ್ತಿ ನಿಂತು ಕೈ - ಕಾಲುಗಳನ್ನು ಗಾಳಿಯಲ್ಲಿ ಚಾಚಿ ಬಿಟ್ಟಾಗ


ಇನ್ನೊಬ್ಬ ಹುಡುಗಿ ಅವನ ಭುಜದ ಮೇಲೇರಿ ನಿಂತು ಬಿಡುತ್ತಾಳೆ! ನೋಡುವವರ ಉಸಿರು ಗಂಟಲಲ್ಲೇ ಸಿಕ್ಕಿಕೊಂಡಂತೆ, ಕ್ಷಣಕಾಲ!


ಇನ್ನೊಮ್ಮೆ ಟ್ಯೂಬ್ ಲೈಟಿನ ಬೆಳಕಿನಲ್ಲಿ ಫಳ - ಫಳ ಹೊಳೆಯುವ ಬಟ್ಟೆಯ ಹುಡುಗಿ ಹಗ್ಗದ ಮೇಲೆ ನಿರಾಳವಾಗಿ ನಡೆಯುತ್ತಾ ಬಂದಂತೆ, ನೋಡುತ್ತಾ.. ಕಡ್ಲೆ ಕಾಯಿ ತಿನ್ನುತ್ತಿದ್ದ ಮಕ್ಕಳಿಗೆಲ್ಲ ಬೆರಗಿನ ಸ್ವರ್ಗವೆ ಕಣ್ಣೆದುರಲ್ಲಿ.


ಸ್ವಲ್ಪ ದೂರ ನಿಂತಿರುತ್ತಿದ್ದ ಯಜಮಾನನ ಪಕ್ಕದಲ್ಲಿ ಅಂಗಿ ತೊಟ್ಟ ಮಂಗ ಕ್ಷಣಕ್ಕೊಮ್ಮೆ ಅವನ ಭುಜದ ಮೇಲೇರಿ - ಇಳಿದು ಮಾಡುತ್ತಿತ್ತು.


ಯಜಮಾನನ ಕೈಯಲ್ಲಿ ಉದ್ದನೆ ಬಳ್ಳಿಯ ಮೈಕು. ಮಂಗನನ್ನು ಹಿಡಿದು ನಿಲ್ಲಿಸಿ ಕೆಳುತ್ತಾನವನು, " ಮನೆಯಲ್ಲಿ ಹೆಂಡತಿ ಮುನಿಸಿಕೊಂಡದ್ದು ಹೇಗಪ್ಪಾ ಮಂಗಣ್ಣಾ...? "


ಮಂಗ ಫಕ್ಕನೆ ಮುಂದಕ್ಕೆ ಹಾರಿ ನಿಂತು ತನ್ನ ಹುಬ್ಬುಗಳನ್ನು ಎತ್ತರಿಸಿ ಬಾಯಿತೆರೆದು ಗರಗಸದಂತ ಹಲ್ಲುಗಳನ್ನು ತೋರಿಸುತ್ತಾ ಕತ್ತು ಮುಂದೆ ಮಾಡಿ " ಗುರ್ರ್............. " ಎನ್ನುತ್ತದೆ.


ಜನರಲ್ಲಿ 'ಹೋ....' ಶಬ್ಧದ ನಗೆಯಲೆಗಳು...


" ಮದುವಣಗಿತ್ತಿ ಹೇಗೆ ನಾಚಿಕೊಳ್ತಾಳಪ್ಪೋ.. ಮಂಗಣ್ಣಾ...? " ಸುಮ್ಮನೊಮ್ಮೆ ಮೇಲೆ ಕೆಳಗೆ ನೋಡಿದ ಮಂಗನ ಪಕ್ಕದಲ್ಲಿ ನೆಲದ ಮೇಲೊಂದು ಚಾಟಿ ಏಟು ಫಟ್ಟನೆ ಬಿದ್ದಾಗ


ಗಡಬಡಿಸಿ ಎದ್ದ ಮಂಗ, ತನ್ನೆರಡು ಕಾಲುಗಳ ಮೇಲೆ ನಿಂತು, ಕೈಗಳೆರಡನ್ನು ಎದೆಯ ಮುಂದೆ ಹೊಸೆದು, ತಲೆ ಬಗ್ಗಿಸಿ, ಕೊರಳು ಕೊಂಕಿಸಿ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬಾಗಿ ಬಳುಕಿ ನಡೆಯುತ್ತದೆ.


ಮತ್ತೆ ಅಪ್ಪಳಿಸುವ ನಗುವಿನಲೆ....


ಮುಂದೆ ಜನರೆಲ್ಲರು ಗುಸು ಗುಸು ನಿಲ್ಲಿಸಿ ಬಿಟ್ಟ ಬಾಯಿ ಬಿಟ್ಟಂತೆ ನಿಲ್ಲುವ ಹೊತ್ತು, ಅವರಲ್ಲಿನ ಆ ಯುವತಿ ಬಣ್ಣ ಬಣ್ಣದ ತುಂಡು ಬಟ್ಟೆಯುಟ್ಟು, ಈಚೆ ವೇದಿಕೆ ಮೇಲೆ ಬಂದಾಗ!!


ಗ್ರಾಮಾಫೋನ್ ತಟ್ಟೆ ತಿರುಗುತ್ತಿದ್ದಂತೆ ಮೈಕಿನಲ್ಲಿ " ಮೆಹೆಬೂಬಾ... ಮೆಹೆಬೂಬಾ..." ಹಾಡು ತೇಲಿ ಬರುತ್ತಾ ಏನೋ ಗುಂಗು ಹಿಡಿದಂತಾಗುತ್ತದೆ..


ಅದರ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ.. ಸೊಂಟ ತಿರುಗಿಸುತ್ತ.. ಬಳುಕುತ್ತ, ಭುಜ - ಕೈಗಳನ್ನು ಕುಣಿಸುತ್ತಾ


ಹೆಣ್ಣು ಮುಂದೆ ಮುಂದೆ ಬಂದರೆ ಜನರೆಲ್ಲ ಸದ್ದಿಲ್ಲದೆ ಅವಳ ಸೊಂಟದಲ್ಲಿ ಕುಲುಕುವ ಗೆಜ್ಜೆಗಳಾಗಿಬಿಡುತ್ತಾರೆ!!


ಹಾಡು ಮುಗಿಯುತ್ತಿದ್ದಂತೆ ಛಕ್ಕನೆ ಅವಳು ಟೆಂಟಿನ ಪರದೆಯ ಹಿಂದೆ ಜಿಗಿದು ಮಾಯವಾದಾಗ, ಅಲ್ಲಿ ಇಲ್ಲಿ ಬೆಪ್ಪಾದಂತಿದ್ದವರ ಬಾಯಲ್ಲಿ ತರ ತರದ ಮಾತುಗಳು...


" ಅವಳು ದುಬೈ ಸೆಂಟು ಹಾಕುತ್ತಾಳಂತೆ.... " - " ಹ್ಞೂ..... ಅವಳೂ ಬೀಡಿ ಸೇದ್ತಾಳಂತೆ... " ಇನ್ನೂ ಏನೇನೋ....


ಬಹಳ ಬಲ್ಲವರಂತೆ ಮಾತಾಡುತ್ತಿದ್ದವರು ಗಂಡಸರೇ. ಯಾಕೆಂದರೆ ಅಲ್ಲಿ ಹೆಂಗಸರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತಲ್ಲ!


ಜನ ಮರುಳಲ್ಲಿ. - ಮಂಡಕ್ಕಿ ಮಾರಾಟ, ಹುರಿದ ಕಡಲೆಕಾಯಿ ಮಾರಾಟ ಜೋರು!


ಆಚೆ ಒಂದು ಮೂಲೆಯಲ್ಲಿ ಪುಟ್ಟ ಕೈಗಾಡಿಯಲ್ಲಿ ಗ್ಯಾಸ್ ಲೈಟಿನ ಬೆಳಕಿಗೆ ಹೊಗೆಯಾಡುವ ಹೆಂಚಿನಿಂದ ಮೊಟ್ಟೆ ದೋಸೆ ಸುಡುವ ವಾಸನೆ... ಹೊಟ್ಟೆಯೊಳಗೆ ಸೌಟಿಟ್ಟು ತೊಳೆಸಿದಂತೆ.


ಇನ್ನೊಂದು ಕಡೆ ಬೀಡಾ - ಪಾನ್ - ಬಾಳೆಹಣ್ಣಿನ ಅಂಗಡಿ..


ಗುಂಪಿನಲ್ಲಿ ನುಗ್ಗಿಕೊಂಡು ನಡೆದಾಡುತ್ತಿದ್ದರೆ ಅವರಿವರ ಬೆವರಿನ ಕಮಟು ವಾಸನೆಗಳ ನಡುವೆ ಹುಳಿ ಹುಳಿ ಸಾರಾಯಿ ಕುಡಿದವರ ತೇಗಿನ ಸದ್ದು.. ಅಸ್ಪಷ್ಟ ಮಾತುಗಳ ಗುಜುಗುಜು..


ತಿಂದದ್ದೆಲ್ಲ ಗಕ್ಕನೆ ಬಾಯಿಗೆ ಬಂದಂತೆ.. ಏನೇ ಆದರೂ ಅಲ್ಲಿ ತಿರುಗುವುದು ಬೇಕು.


ಕಾಲ ಕೆಳಗೆ ಹಸಿ ಹುಲ್ಲಿನೆಡೆ ಹತ್ತು ಸಲ ಕಲ್ಲು ಡನ್ಕಿ ನೋಯಿಸಿಕೊಂಡರೂ ಕಣ್ಣಹೊರಳೆಲ್ಲ ಸರ್ಕಸ್ ಟೆಂಟಿನ ಕಡೆಗೆ!


ಓರಗೆಯ ಪುವಕ್ಕು - ಚೋಮು - ಕಿಟ್ಟು - ಜೋಕ್ಕಿ - ಲಲಿತರೆಲ್ಲ ಸೈನ್ಯ ಕಟ್ಟಿಕೊಂಡವರು, ಗುಂಪಿನಲ್ಲಿ ಕೊಂಚ ಮುಚ್ಚಿಟ್ಟು ಕೊಂಡಂತೆ ಓಡಾಡಿಸುತ್ತಿದ್ದದ್ದು " ಧನಿಕ್ಕುಲೆ ಬಾಲೆ"ಯನ್ನು.


ಊರಿನಲ್ಲಿ ಸ್ವಲ್ಪ ದೊಡ್ಡವರೆಂದು ಕರೆಸಿಕೊಳ್ಳುವವರ ಮಕ್ಕಳು ಅಲ್ಲಿಗೆ ಬರಬಾರದು.


ಹಾಗೆ ನೋಡಿದರೆ ಅಪ್ಪನೂ ಅದೇ ಸಾಲಿಗೆ ಸೇರುವವರಾಗಿದ್ದರೂ, ಕೊನೆಯ ಮಗಳಿಗೆ , "ಅಲ್ಲಿ ಹೋಗಬೇಡ.. ಇಲ್ಲಿ ಹೋಗಬೇಡ.. ಅದು ಮಾಡಬೇಡ.. ಇದು ಬೇಡವೆ ಬೇಡ... "


- ಎಂಬೆಲ್ಲ 'ಬೇಡದ' ವಾಕ್ಯಗಳ ಪ್ರಯೋಗವನ್ನು ಬಹಳ ಮಾಡಿರಲಿಲ್ಲ.


ಬಹುಶ: ಅವೆಲ್ಲ ಅಕ್ಕಂದಿರಿಗೆ - ಅಣ್ಣನಿಗೆ ಹೆಚ್ಚು ಉಪಯೋಗವಾಗಿ, ನನ್ನ ಹೊತ್ತಿಗೆ ತಮ್ಮ ಅರ್ಥ ಕಳೆದುಕೊಂಡವಿರಬೇಕು... :) - ಇಲ್ಲವಾದರೆ ,


ಮಧ್ಯಾಹ್ನ ಎಲ್ಲರ ಹಿತನಿದ್ದೆಯ ಸಮಯದಲ್ಲಿ, ಮಕ್ಕಳ ಜೊತೆ ಸೇರಿ ತೋಟದೊಂದು ತುದಿಯ 'ಅಡಿಬಾಯಿ' ಕೆರೆಯಲ್ಲಿ ಮುಸ್ಸಂಜೆ ತನಕ ಆಡುವುದು ತಿಳಿದ ಮೇಲೂ


"ಬೇಡ" ಪದ ಪ್ರಯೋಗ ಮಾಡದಿರುತ್ತಿದ್ದರೆ??


ಅಬ್ಬಾ.... ಅಡಿಬಾಯಿ ಕೆರೆ ಅದೆಷ್ಟು ಆಳವೋ... ಅಂತೂ ಮಕ್ಕಳು ಮುಳುಗಿದರೆ ಕಾಣದಷ್ಟು ನೀರು ನಿಶ್ಚಯ!


ಎಲ್ಲಿ ಕಾಲಿಟ್ಟರೂ ಹುಗಿದುಕೊಂಡು, ಎದ್ದು ಬರಲಾರದಷ್ಟು ಜವುಗು ನೆಲವಿತ್ತು!!






( ಮುಂದುವರಿಯುತ್ತದೆ. )

No comments:

Post a Comment