Monday 3 January 2011

ನೆನಪು - 6

ಸ್ವರ ಸ್ವಲ್ಪ ದೂರದಿಂದಲೇ ಕೇಳುವುದು... " ವಂದಿಪೆ ನಿನಗೆ ಗಣನಾಥ... ಮೊದಲೊಂದಿಪೆ ನಿನಗೆ..."
ಪುಟ್ಟ ಕಣ್ಣುಗಳನ್ನು ಉರುಟುರುಟಾಗಿ ಅರಳಿಸಿ ಅತ್ತಿತ್ತ ತಿರುಗಿಸುತ್ತಲೇ ಪುಟ್ಟ ಕೈಗಳಿಂದ ಸ್ಕರ್ಟುಗಳನ್ನು ಜಗ್ಗಿ ಜಗ್ಗಿ ಹಿಡಿದೂ.. ಬಿಟ್ಟೂ.. ಮಾಡುತ್ತಾ,
ಕೆಲವೊಮ್ಮೆ ಅಂಗೈ ಬೆವರನ್ನು ಸ್ಕರ್ಟಿಗೊರೆಸುತ್ತ, ಪ್ರಾರ್ಥನೆ ಮುಗಿಯಿತೋ..,
ಎದ್ದೆನೋ..ಬಿದ್ದೆನೋ.. ಎಂದು ಮಕ್ಕಳೆಲ್ಲ ಓಡಿ ಬಂದು ತಮ್ಮ ತಮ್ಮ ಸ್ಥಳದಲ್ಲಿ ಧೊಪ್ಪನೆ ಕುಳಿತಾಗ ವೇದಿಕೆಯ ಮೇಲೆ ಇತರರ ಮಾತುಗಳು ಶುರು..

ಗಾಂಧೀ, ಸುಭಾಷಚಂದ್ರ , ಆಜಾದು, ನೆಹರು.. ಲಾಲ್ ಬಹಾದ್ದೂರ್.. ಹೆಸರುಗಳ ಮೇಲೆ ಹೆಸರುಗಳು..
ಪಾಠ ಪುಸ್ತಕಗಳಲ್ಲಿ ಕಂಡ ಅವರ ಚಿತ್ರಗಳಿಗೆ ಅವರವರ ಹೆಸರುಗಳನ್ನೂ ಸೇರಿಸುತ್ತಾ, ಆಕಾರಗಳಿಗೆ ಜೀವ ತುಂಬಿಸಿ,
ಅವುಗಳಿಗೆ ಚಲನೆ - ಮಾತುಗಳನ್ನು ಕೊಟ್ಟು ಕಲ್ಪನೆಯ ಚಿತ್ರ ಕಟ್ಟು ಕಟ್ಟುತ್ತ, ಕೆನ್ನೆಗೆ ಕೈ ಕೊಟ್ಟು ಕೇಳಿಯೇ ಕೇಳುತ್ತಿದ್ದ ಪುಟ್ಟ ಜೀವಗಳಿಗೆ
ಕಾರ್ಯಕ್ರಮ ಮುಗಿದ ನಂತರ ಸಿಗುವ ಪೆಪ್ಪೆರುಮಿಂಟಿನ ಸಿಹಿಯ ನೆನಪಾಗಿ, ನಾಲಗೆಯಲ್ಲಿ ನೀರು!
ಹಿರಿಯ ವಿದ್ಯಾರ್ಥಿಗಳು ಇಬ್ಬಿಬ್ಬರು ಬಾಗಿಲ ಪಕ್ಕದಲ್ಲಿ ಆಗಲೇ ಬುಟ್ಟಿ ತುಂಬಾ ಚಾಕೊಲೇಟು ಹಿಡಿದು ಸಿದ್ಧರಾಗಿ ನಿಂತಿರುತ್ತಿದ್ದರಲ್ಲ!!

ದೇಶಭಕ್ತಿಯ ದಿನಗಳು ಹೀಗಾದರೆ ಹಬ್ಬ- ಪೂಜಾದಿನಗಳು ಇನ್ನೂ ವಿಶೇಷವೆನಿಸುತ್ತಿದ್ದವು. ವಿಜಯದಶಮಿಯ ಶಾರದಾಪೂಜೆ ಇರಲಿ, ಚೌತಿಯ ಗಣೇಶನ ಪೂಜೆ ಇರಲಿ, ಕೊನೆಯಲ್ಲಿ ಪ್ರಸಾದ ರೂಪದಲ್ಲಿ
ಬೆಲ್ಲ ಕಲೆಸಿದ ಅವಲಕ್ಕಿ, ಬಾಳೆಹಣ್ಣುಗಳು ಸಿಗುತ್ತಿದ್ದವು.
ಪೂಜೆಗಿಂತ ಮೊದಲು ಮತ್ತು ಪೂಜೆ ಮುಗಿದ ಮೇಲೂ ಬಹಳ ಹೊತ್ತು ಭಜನೆಗಳನ್ನು ಹಾಡುವ ಕ್ರಮವಿತ್ತು.

ಎಲ್ಲ ಮುಗಿದ ಮೇಲೆ ಕಾಗದದಲ್ಲಿ ಹಾಕಿಕೊಟ್ಟ ಪ್ರಸಾದ ಬೆಲ್ಲದವಲಕ್ಕಿಯಲ್ಲಿ ಸ್ವಲ್ಪ ತಿಂದು, ಇನ್ನು ಮಿಕ್ಕಿದ್ದನ್ನು ಹಾಗೆಯೇ ಮಡಿಚಿಟ್ಟುಕೊಂಡು ಗುಂಪು-ಗುಂಪಾಗಿ ಮಕ್ಕಳು ಶಾಲೆಯಿಂದ ಹೊರಬಂದರೆ
ಕೆಲವರ ದಾರಿ ಶಾಲೆಯಿಂದ ಹಿಂದೆ - ಗುಡ್ಡಕ್ಕೆ.. ಇನ್ನು ಕೆಲವರು ಬಲಕ್ಕೆ, ಇನ್ನು ಕೆಲವರು ಎಡಕ್ಕೆ.. ಕೆಲವರು ಕೆಳಗೆ - ಮಂಚಿ ತಡ್ಕ ಪೇಟೆ(!)ಯ ಕಡೆ..
ಇನ್ನು ಕೆಲವರು ಇನ್ನೂ ಆಚೆ..ಆಟದ ಮೈದಾನದಿಂದಾಚೆ ಇರುವ ಗುಡ್ಡದ ಕಡೆಗೆ..
ಹೀಗೆ ಚದುಚದುರಿ ನಡೆಯುತ್ತಿದ್ದ ಪುಟ್ಟ ಮಕ್ಕಳಿಗೆ, ಉತ್ಸಾಹದ ಬುಗ್ಗೆಗಳಿಗೆ ಮಧ್ಯಾಹ್ನದ ಹನ್ನೆರಡು-ಒಂದು ಗಂಟೆಯ ಚುರುಗುಡುವ ಬಿಸಿಲಿನ ಪರಿವೆ ಎಲ್ಲಿ?

ದಾರಿಯುದ್ದಕ್ಕೂ ಕಾರ್ಯಕ್ರಮದ ಬಗ್ಗೆ, ಆ ಮಾಷ್ಟ್ರ ಬಗ್ಗೆ, ಈ ಹುಡುಗನ ಬಗ್ಗೆ, ಮಾತೋ..ಮಾತು.. ನಗು-ಚಟಾಕಿಗಳು... - ಬಾಯಲ್ಲಿ ಬೆಲ್ಲದ ಸಿಹಿ..
ಕಾಲ ಕೆಳಗೆ ಸಿಕ್ಕಿದ ಕೋಲನ್ನೆತ್ತಿಕೊಂಡು, ಪಕ್ಕದ ಪೊದೆಗಳ ಹಸಿರೆಲೆಗಳ ಮೇಲೆ ಸುಮ್ಮ ಸುಮ್ಮನೆ ಖಡ್ಗ ಪ್ರಹಾರವೆಂಬಂತೆ ಬೀಸುವ ಏಟುಗಳು..
ಶಿಸ್ತಿನಲ್ಲಿ ನಡೆಯುವ ಇರುವೆ ಸಾಲುಗಳನ್ನು ಕಾಲಿಂದ - ಕೋಲಿಂದ ತಪ್ಪಿಸಿ, ಅವನ್ನು ಚಲ್ಲಾಪಿಲ್ಲಿಯಾಗಿಸಿ, ಅವಕ್ಕೊಂದಷ್ಟು ಕಿರಿಕಿರಿ ಕೊಟ್ಟು,
ಮೇಲೆ ಹಾರುವ ಕಾಗೆಗೊಂದು ರೊಂಯ್ಯನೆ ಕಲ್ಲು ಬೀಸಿ, 'ಉಯ್ಯಡ್ಕ' ಗುಡ್ಡ ಹತ್ತಲು ಮೊದಲಿಟ್ಟರೆ ಗೇರು ಮರದಲ್ಲಿ ಅಡ್ಡಾಡುವ ಮಂಗಗಳು ಧಡಕ್ಕನೆದ್ದು ಪಕ್ಕದ ಮರಗಳಿಗೆ ಹಾರಿ ದೂರ ಕೂತು, ಹಲ್ಲು ಕಿಸಿಯುತ್ತಿದ್ದವು!

ಉಯ್ಯಡ್ಕ ಗುಡ್ದಕ್ಕೆಲ್ಲ ಅಪ್ಪನದೊಂದೇ ದೊಡ್ಡ ಮನೆ. ಅಲ್ಲಿ ವಿಶಾಲವಾದ ಅಂಗಳಕ್ಕೆ ತಾಗಿ ಇಮಾಮು ಪುರ್ಬುವಿನ ಮನೆ. ಅವನು ತುಂಬಾ ಮೊದಲಿಂದಲೂ ಅಪ್ಪನಲ್ಲಿಗೇ ಕೆಲಸಕ್ಕೆ ಬರುತ್ತಿದ್ದದ್ದು.
ಇನ್ನೂ ಒಂದೆರಡು ಕೆಲಸಗಾರರ ಮನೆಗಳು ಬಿಟ್ಟರೆ ಬೇರೆ ಯಾರಿಲ್ಲ. ಮಂಚಿ ತಡ್ಕದಿಂದ ಉಯ್ಯಡ್ಕ ಮನೆ ತಲಪಬೇಕಾದರೆ ಎರಡು - ಮತ್ತೆರಡು ದಾರಿಗಳು. ಗುಡ್ಡ ಹತ್ತಿಯೇ ಹೋಗಬೇಕಾದ ಎರಡು ದಾರಿಗಳಲ್ಲಿ ಒಂದು
'ಗೆದ್ದಲು ಮೂಲೆ' ದಾಟಿ ಹೋಗುವುದು, ಇನ್ನೊಂದು 'ಅಂಬಟೆಕೊಚ್ಚಿ'ಗೇ ಹೋಗಿ ಹೋಗುವುದು.
ಇನ್ನೊಂದು ದಾರಿ ಮಾರ್ಗದ್ದು, ಅಂದರೆ ಅದು ರಸ್ತೆ. ಅದು ಬಹಳ ಸುತ್ತು! ನಡೆದುಹೋಗಲು ತುಂಬಾ ದೂರ. ಆದರೂ ಆ ದಾರಿ ಮೂಲಕ ಹಲವಾರು ಸಾರಿ ಆಟವಾಡುತ್ತ ಹೋಗಿದ್ದಿದೆ.
ಹಾ೦.. ಇನ್ನೊಂದು ದಾರಿಯಿದೆ, ಶಾಲೆಯ ಮೈದಾನದ ಆಚೆ ಬದಿಯಿಂದ 'ಕೂಡ್ಲು' ಗುಡ್ಡೆಗೆ ಹತ್ತಿ ಹೋಗುವ ದಾರಿ!
(ಇಲ್ಲಿಂದ ರಸ್ತೆಯೂ ಇದೆ.) ಈ ಗುಡ್ಡದ ದಾರಿ ಮಳೆಗಾಲದಲ್ಲಿ ಮಾತ್ರ ಬಹಳ ಪ್ರಿಯ ನಮಗೆ. ಏಕೆಂದರೆ ಮಳೆಗಾಲದಲ್ಲಿ ಮಾತ್ರ 'ಬೆಳ್ಳಿ' ತುಂಬಿ ಹರಿಯುತ್ತಾ ಇದ್ದದ್ದು!
ಹೌದಲ್ಲ, ಮಳೆಗಾಲದಲ್ಲಿ ಈ ದಾರಿ ಮಾತ್ರವೇ ಅಲ್ಲ, ಹಸಿರುಗುಡ್ಡೆಗಳ ಎಲ್ಲ ದಾರಿಗಳೂ ನಮಗೆ ಪ್ರಿಯ!! :)

ಅಕ್ಕ ಪುತ್ತೂರು ಪೇಟೆಯಿಂದ ತಂದುಕೊಟ್ಟ ಕೆಂಪು ಟೈ'ಯ ಫ್ರಾಕು ತೊಟ್ಟು, ಪುಸ್ತಕದ ವಯರು ಚೀಲದ ಕೈಯನ್ನು ಹಣೆಗೆ ಸಿಕ್ಕಿಸಿ, ಬೆನ್ನ ಹಿಂದಕ್ಕೆ ಚೀಲ ಇಳಿಬಿಟ್ಟು ( ಯಾವಾಗಲೂ ಅಲ್ಲ, ಕೆಲವೊಮ್ಮೆ ಮಾತ್ರ ಹೀಗೆ..)
ಉಯ್ಯಡ್ಕ ಗುಡ್ಡೆಯಿಂದ ಮಂಚಿತಡ್ಕ ಶಾಲೆಗೇ ಇಳಿಯುತ್ತಿದ್ದ ಆ ದಿನಗಳಲ್ಲಿ " ಉಯ್ಯಡ್ಕ ಧನಿಕ್ಕುಳೆ ಎಲ್ಯ ಬಾಲೆ " ( ಉಯ್ಯಡ್ಕ ಧಣಿಗಳ ಸಣ್ಣ ಮಗಳು) ಎಂದೇ ಕರೆಸಿಕೊಳ್ಳುತ್ತಿದ್ದಿದ್ದು!

(ಮುಂದುವರಿಯುವುದು...)

4 comments:

  1. ನಾವೂ ಉಯ್ಯ್ಡಡ್ಕದ ದಾರಿಯಲ್ಲಿ ಸಾಗಿದೆವು......

    ReplyDelete
  2. "ಉಯ್ಯಡ್ಕ ಧನಿಕ್ಕುಳೆ ಎಲ್ಯ ಬಾಲೆ".. ಚೆನ್ನಾಗಿದೆ.. ಅಲ್ಲಿರುವ ಎಷ್ಟೋ "ಪರಬ್ಬು"ಗಳಿಗೆ ನೀವು ಈಗಲೂ "ಉಯ್ಯಡ್ಕ ಧನಿಕ್ಕುಳೆ ಎಲ್ಯ ಬಾಲೆ"ಯೇ ಆಗಿರುತ್ತೀರಿ

    ReplyDelete
  3. ನಿಮ್ಮಂತ ಓದುಗರು ಜೊತೆಯಾದರೆ ದಾರಿ ಹಗುರಾದೀತು, ಹಸಿರು ಮೆರೆದೀತು.. :)

    ಧನ್ಯವಾದಗಳು ಶರ್ಮರೆ,

    ReplyDelete
  4. @ ಜಯರಾಮ್ - ನಿಜ.. ಬಾಲ್ಯವೆಂಬುದೆ ಬೆರಗು ಹುಟ್ಟಿಸುವ ವಿಸ್ಮಯದ ಲೋಕ !



    ವಂದನೆಗಳು, ನಿಮ್ಮ ಸ್ಪಂದನೆಗೆ..

    ReplyDelete