Sunday 6 February 2011

ನೆನಪು - ೭

'ಉಯ್ಯಡ್ಕ..' ಹೆಸರು ಹೇಳುತ್ತಿದ್ದರೆ ಮನಸು ಸಂತಸದ ಉಯ್ಯಾಲೆ ತೂಗಿದಂತೆ.., ಜೀವ ಹಿಗ್ಗಿ ಜೀಕಿದಂತೆ!

ಮೊದಲು ಮುಖಮಂಟಪವಿದ್ದಿದ್ದ ಮನೆ, ಅಂದರೆ ಮೂಲಮನೆ 'ಕಟ್ಟದ ಕೋರಿಕಾರಿ'ನಿಂದ ಅಜ್ಜ ಮತ್ತೆ ಅಪ್ಪ ಉಯ್ಯಡ್ಕ ದಲ್ಲಿ ಆಸ್ತಿ ಮಾಡಿಕೊಂಡು ಬಂದಾಗ ಕಟ್ಟಿದ ಮೊದಲಮನೆ.

(ಮತ್ತೆ ಆ ಸಮಯದಲ್ಲಿ ಅಜ್ಜಿ ಮೊದಲಬಾರಿ ಉಯ್ಯಡ್ಕಕ್ಕೆ ಬರುವಾಗ ಅವರನ್ನು ನಾಲ್ಕಾಳು ಜನರು 'ಮೇನೆ'ಯಲ್ಲಿ ಹೊತ್ತು ಕರೆತಂದಿದ್ದರಂತೆ!
ಮಿಕ್ಕಿದವರೆಲ್ಲರೂ ನಡೆದೇ ಬರುವವರು, ಗುಡ್ಡ ತಾನೇ, ರಸ್ತೆಯಿನ್ನೂ ಆಗಿರಲಿಲ್ಲವಲ್ಲ!! ಇರಲಿ..)

ಅನಂತರದಲ್ಲಿ ಅಪ್ಪ ಅದೇಕೋ ಆ ಮುಖಮಂಟಪವನ್ನೊಡೆಸಿ, ಮನೆ 'ಎಲ್' ಆಕೃತಿಯಲ್ಲಿ ಬರುವಂತೆ ಕಟ್ಟಿಸಿದ್ದು.

ಆದರೆ ಆ ಮುಖಮಂಟಪದ ಕಟ್ಟೆ - ಚಿಟ್ಟೆಗಳ ನೆನಪೆಷ್ಟು ಆಪ್ತ..
ಕಟ್ಟೆಯ ಕೆಳಬದಿಯ ಜಗುಲಿಯಲ್ಲೇ ಕಲ್ಲಾಟ.. ಕೆಲವೊಮ್ಮೆ ಸಂಜೆಗೆ ಮೊದಲು ಶಾಲೆಕೆಲಸವೂ ಅಲ್ಲೇ.. ಮತ್ತೆ ಅದೇ ಕಟ್ಟೆಯಿಂದ ಬಿದ್ದು ದೊಡ್ಡಕ್ಕನೂ ಪುಟ್ಟಕ್ಕನೂ ಕೈ ಮುರಿದುಕೊಂಡಿದ್ದು!

ಇಬ್ಬರು ಅಕ್ಕಂದಿರು, ದೊಡ್ಡವನು ಅಣ್ಣ, ಅಪ್ಪ - ಅಮ್ಮ , ಅಜ್ಜ - ಅಜ್ಜಿಯರ ಜೊತೆಯಿದ್ದ ಉಯ್ಯಡ್ಕಮನೆಯ ಪಡಸಾಲೆ - ದೇವರ ಮನೆ - ಊಟದ ಮನೆ, ಮತ್ತಲ್ಲಿನ ರಾತ್ರಿ - ಹಗಲುಗಳು, ಜೀವ ತುಂಬಿದ ಮನೆಯ ಮುಂದಿನ
ಪನ್ನೇರಳೆ ಮರ.. ಅದರಲ್ಲಿ ಅಪ್ಪ ಕಟ್ಟಿಸಿ ಕೊಟ್ಟ ದಪ್ಪ ಬಳ್ಳಿಯ, ಪುಟ್ಟ ಮಣೆಯ ಉಯ್ಯಾಲೆ..

ಶಾಲೆಗೆಂದು ಹೊರಟರೆ, ಮನೆ ಮೆಟ್ಟಲಿಳಿದು ಬಿಳಿ ಮಂಜೆಟ್ಟಿ ಗಿಡಗಳ ಬಳಸಿ, ಮುಂಡಪ್ಪ ಮಾವಿನ ಮರದ ಕೆಳಗಿಂದ ಹತ್ತು - ಹದಿನೈದು ಹೆಜ್ಜೆಗೆ ಸಣ್ಣದೊಂದು 'ಅಗರು' ದಾಟಿ,
ಅಲ್ಲೇ ಮುಂದೆ 'ಮೆಟ್ಲ ಸುರಂಗ' ದ ಬದಿಯಲ್ಲೇ ನಡೆದು ಕಮಲನ ಮನೆಯ ಹತ್ತಿರಕ್ಕೆ ಬಂದು ಅಲ್ಲಿನ್ನೊಂದು ಕಲ್ಲಿನ ದೊಡ್ಡ ಅಗರು ದಾಟಬೇಕು. ಅದು ಉಯ್ಯಡ್ಕ ಜಾಗದ ಬೌಂಡರಿ ಲೈನು.

ಅಗರು(ಕಾಂಪೌಂಡ್) ದಾಟಿದರೆ ಆಚೆಗೆ ಗವರ್ನಮೆಂಟಿನ ಬೀಜದ ಕಾಡು.. ಗೇರುಬೀಜದ ಮರಗಳ ಬ್ಲಾಕು.

ಕೆಲಸದ 'ಲಚ್ಮಿ'ಯ (ಲಕ್ಷ್ಮಿಯ) ಮಗಳು ಪೂವಕ್ಕು, ಚೋಮು, ಸಿವರಾಮ, ಇಮಾಮನ ಮನೆಯ ಜೊಕ್ಕಿ(ಜಾಕಿ), ದವಿದ(ಡೇವಿಡ್), ಎಲ್ಲ ಮಕ್ಕಳೊಂದಿಗೆ ಅಗರು ದಾಟಿ ಬರುವಾಗ ಅಲ್ಲೇ ಇರುವ ಇನ್ನೊಂದು ಕೇರಿ
ಮಕ್ಕಳೂ ಗುಂಪಾಗಿ ಸೇರಿಕೊಳ್ಳುತ್ತಿದ್ದರು. ಊರಿನ ಹಿರಿಯರು, ಪರಿಚಿತರು ಸಿಕ್ಕಾಗ ನಮ್ಮ ಗುಂಪು ಬೇರೆ - ಬೇರೆಯಾದರೂ ಅವರು ಯಾರೂ ಇಲ್ಲದಿದ್ದಾಗ ಎಲ್ಲರೂ ಆಟ ಆಡುತ್ತಿದ್ದುದು ಒಟ್ಟಾಗಿಯೇ.

ಈಗ, ಅವರು ದೊಡ್ಡ ಅಗರಿಗೆ ತಾಗಿದ ಹಾಗೆಯೇ ಮನೆಗಳನ್ನು ಮಾಡಿಕೊಂಡಿದ್ದಾರಾದರೂ ಅವರೆಲ್ಲ ಮೊದಲಿದ್ದಿದ್ದು ಉಯ್ಯಡ್ಕ ಗುಡ್ಡಕ್ಕೆ ಸೇರಿದಂತೆಯೇ ಇರುವ ಇನ್ನೊಂದು ಗುಡ್ಡದ ಮಧ್ಯ ಭಾಗದಲ್ಲಿ.

ಅಲ್ಲಿಗೇ ಹೆಸರು 'ಅಂಬಟೆ ಕೊಚ್ಚಿ'! ಆಗಲೇ ಹೇಳಿದೆನಲ್ಲ... ಅಲ್ಲಿ ಕೆಲವು ಹುಣಸೆ ಮರಗಳು , ಅಂಬಟೆ ಮರಗಳೂ ಇರುವುದು ನಿಜ.
ಸಣ್ಣ ಸಣ್ಣ ಕೆಲವು ಗದ್ದೆಗಳು.. ನೀರಿನ ಹೊಂಡಗಳು.
ಅಲ್ಲಿನ ಹುಣಸೆ ಹಣ್ಣಿನ ಮತ್ತು ಗುಡ್ಡದ ನೆಲ್ಲಿಕಾಯಿಗಳ ಆಸೆಯನ್ನು ಹತ್ತಿಕ್ಕಲಾಗದೆ "ಆ ದಾರಿಯಾಗಿ ಹೋಗಬೇಡಿ"ರೆಂಬ ದೊಡ್ಡವರ ಮಾತುಗಳಿಗೆ ಜಾಣ ಕಿವುಡುತನ ತೋರಿ ಆ ದಾರಿಯಾಗಿಯೇ ನುಗ್ಗುತ್ತಿದ್ದ ಹುಮ್ಮಸ್ಸು.

ಅಲ್ಲಿಯೇ ಇದ್ದದ್ದು ತನಿಯ'ನ ಅಮ್ಮ 'ದೇಯಿ'(ದೇವಿ?) ತೊಂಡಿಯ ಮನೆ. ಆ ಮನೆಯ ಮುಂದೆಯೇ ಹಾದುಹೋಗಬೇಕು.

ದೇಯಿ ಕಪ್ಪು ಬಣ್ಣದ ವೃದ್ಧ ಜೀವ. ಲಕ್ಷಣದ ಮುಖದವಳು.

ಅರುವತ್ತೈದೋ...ಎಪ್ಪತ್ತೋ.. ದಾಟಿದ ವಯಸ್ಸಿನಲ್ಲೂ ಅವಳ ಕಣ್ಣುಗಳಲ್ಲಿ ಹೊಳಪು..
ಸದಾ ಉತ್ಸಾಹದ ಬುಗ್ಗೆಯಂತೆ ಕೈಯಲ್ಲಿ ಕತ್ತಿಯೋ, ಅಡಿಕೆ ಹಾಳೆಯೋ, ತೆಂಗು ಸೋಗೆಯೋ ಹಿಡಿದು
ಎದುರಾಗುತ್ತಿದ್ದ ಅವಳ ಹಣೆ..ಕೆನ್ನೆಗಳಲ್ಲಿ ಬಾಗಿದ ಗೆರೆ ಗೆರೆ - ನೆರಿಗೆಗಳು, ಎಲೆ ತಿಂದು ಕೆಪಗಾದ ಬೊಚ್ಚು ಬಾಯಿ.. ಹರಿದೇ ಹೋಗಿದೆಯೇನೋ ಎನ್ನುವಂತೆ ಜೋಲುವ ಅವಳ ಕಿವಿಯ ತೂತುಗಳು..
ರವಕೆ ಇಲ್ಲದೆ, ಕತ್ತಿನ ಮಣಿಸರಗಳಿಗೇ ಸೆರಗು ಸಿಕ್ಕಿಸಿ, ಸೊಂಟಕ್ಕೆ ಎಳೆದು ಸುತ್ತಿದ, ಮೊಣಕಾಲ ಕೆಳಗಿನವರೆಗಿನ ಅವಳ ಸೀರೆ.. ಕತ್ತಿನ ಹಿಂದೆ ಅಂಬಟೆಯಷ್ಟೇ ಪುಟ್ಟದಾದ ನರೆಗೂದಲ ಗಂಟು..
ಕಂಡಾಗಲೆಲ್ಲ 'ಕುೡ ದೆತ್ತಿ'( ಚಿಕ್ಕೆಜಮಾನಿ) ಎಂದು ಬಹಳ ಗೌರವದಿಂದ, ಆತ್ಮೀಯತೆಯಿಂದ ಕರೆಯುತ್ತಿದ್ದವಳು.

ಆ ಇಳಿಜಾರು ಅಂಬಟೆಕೊಚ್ಚಿಯ ಗದ್ದೆಗಳಲ್ಲಿ ಇನ್ನೂ ಕೆಲವು ಹೆಣ್ಗಳ ಜೊತೆ ಸೇರಿ 'ನೇಜಿ' ನೆಡುವಾಗ ದೇಯಿ ಹಾಡುವ ರಾಗದ 'ಪಾಡ್ದನ'ಗಳನ್ನು ಕೇಳಬೇಕು!

ಚೆನ್ನಾಗಿ 'ಒಬೇಲೆ' ಹೇಳುತ್ತಾಳೆನ್ದೇ ಅವಳು ಆಪ್ತಳೆನ್ನಿಸುತ್ತಿದ್ದುದು. ಅವಳ ದನಿಗೆ ದನಿ ಸೇರಿಸಿ ಹಾಡಿದ ದಿನಗಳಲ್ಲಿ ಮನೆ ಸೇರುವಾಗ ಮುಸ್ಸಂಜೆ ಮೀರಿ ಅಮ್ಮನ ಕಣ್ಣುಗಳ ಆತಂಕಕ್ಕೆ ಗುರಿಯಾಗಿ ಅಲ್ಲೊಮ್ಮೆ ತಿರುಗಿ ದೇಯಿ'ಯ ಹಾಡುಗಳ

ಪುನರಾವರ್ತನೆಯಾದಾಗ ಅಮ್ಮನಿಂದ ಸಿಗುತ್ತಿದ್ದುದು ಮುಗುಳ್ನಗೆ; ಮತ್ತು ಬಿಗಿಯಪ್ಪುಗೆ!



(ಮುಂದುವರಿಯುವುದು...)

No comments:

Post a Comment